ಕಲಾಪ ವ್ಯರ್ಥ ಖಂಡಿಸಿ ಇಂದು ಪ್ರಧಾನಿ ಹಾಗೂ ಬಿಜೆಪಿ ಸಂಸದರಿಂದ ಉಪವಾಸ

By Suvarna Web DeskFirst Published Apr 12, 2018, 7:42 AM IST
Highlights

ಜೆಟ್‌ ಅಧಿವೇಶನದ ವೇಳೆ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ತೀವ್ರ ಗದ್ದಲದಿಂದಾಗಿ ಸಂಸತ್ತಿನ ಉಭಯ ಸದನಗಳು ಶೂನ್ಯ ಸಾಧನೆಯಲ್ಲಿ ಮುಕ್ತಾಯವಾಗಿರುವುದನ್ನು ಪ್ರತಿಭಟಿಸಲು ಬಿಜೆಪಿ ಸಂಸದರು ಗುರುವಾರ ಒಂದು ದಿನದ ಸಾಂಕೇತಿಕ ಉಪವಾಸ ಪ್ರತಿಭಟನೆ ಕೈಗೊಳ್ಳಲಿದ್ದಾರೆ. 

ನವದೆಹಲಿ: ಬಜೆಟ್‌ ಅಧಿವೇಶನದ ವೇಳೆ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ತೀವ್ರ ಗದ್ದಲದಿಂದಾಗಿ ಸಂಸತ್ತಿನ ಉಭಯ ಸದನಗಳು ಶೂನ್ಯ ಸಾಧನೆಯಲ್ಲಿ ಮುಕ್ತಾಯವಾಗಿರುವುದನ್ನು ಪ್ರತಿಭಟಿಸಲು ಬಿಜೆಪಿ ಸಂಸದರು ಗುರುವಾರ ಒಂದು ದಿನದ ಸಾಂಕೇತಿಕ ಉಪವಾಸ ಪ್ರತಿಭಟನೆ ಕೈಗೊಳ್ಳಲಿದ್ದಾರೆ. ಈ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆದಿಯಾಗಿ ಎಲ್ಲಾ ಬಿಜೆಪಿ ಮುಖಂಡರು ಮತ್ತು ಸಂಸದರು ಭಾಗಿಯಾಗಲಿದ್ದಾರೆ.

ನಿರಶನ ಪ್ರತಿಭಟನೆಗೂ ಮುನ್ನ ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ‘ಬಜೆಟ್‌ ಅಧಿವೇಶನಕ್ಕೆ ಅಡ್ಡಿಪಡಿಸುವ ಮೂಲಕ ಪ್ರಜಾಪ್ರಭುತ್ವದ ಕತ್ತುಹಿಸುಕಿದ ಬೆರಳೆಣಿಕೆಯಷ್ಟುಜನರ ಉದ್ದೇಶವನ್ನು ಬಯಲಿಗೆಳೆಯಲು ಬಿಜೆಪಿ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಗುರುವಾರ ನಿರಶನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯ ಸಿದ್ಧಪಡಿಸಿರುವ ಯೋಜನೆಯ ಪ್ರಕಾರ, ಸಂಸದರು ಹಾಗೂ ಮುಖಂಡರು ದೇಶದೆಲ್ಲೆಡೆ ಪ್ರತಿಭಟನೆ ಕೈಗೊಳ್ಳಲಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಹಾಗೂ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಪಟನಾದಲ್ಲಿ ಉಪವಾಸ ಕೈಗೊಳ್ಳಲಿದ್ದಾರೆ. ಅದೇ ರೀತಿ ವಿವಿಧ ಸಚಿವರು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಡಿಫೆನ್ಸ್‌ ಎಕ್ಸ್‌ಪೋನಲ್ಲಿ ಭಾಗಿಯಾಗಲಿರುವ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್‌ ಚೆನ್ನೈನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಬೆಂಗಳೂರಿನಲ್ಲಿ, ಸಂಸದೀಯ ವ್ಯವಹಾರಗಳ ರಾಜ್ಯಖಾತೆ ಸಚಿವ ವಿಜಯ್‌ ಗೋಯಲ್‌ ತಮಿಳುನಾಡಿನಲ್ಲಿ ಮತ್ತು ಎಂ.ಜೆ. ಅಕ್ಬರ್‌ ಅವರು ಮಧ್ಯ ಪ್ರದೇಶದ ವಿದಿಶಾದಲ್ಲಿ ನಿರಶನ ಕೂರಲಿದ್ದಾರೆ.

ಉಪವಾಸವಿದ್ದೇ ಕೆಲಸ ಮಾಡಲಿದ್ದಾರೆ ಮೋದಿ

ಉಪವಾಸವಿದ್ದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ತಮಿಳುನಾಡಿಗೆ ಭೇಟಿ ನೀಡಲಿರುವ ಮೋದಿ, ಚೆನ್ನೈನಲ್ಲಿ ಡಿಫೆನ್ಸ್‌ ಎಕ್ಸ್‌ಪೋ-2018 ಅನ್ನು ಉದ್ಘಾಟಿಸಲಿದ್ದಾರೆ.

ಹುಬ್ಬಳ್ಳಿಯಲ್ಲಿ ಅಮಿತ್‌ ಶಾ ನಿರಶನ: ಕರ್ನಾಟಕ ವಿಧಾನಸಭೆ ಪ್ರಚಾರದಲ್ಲಿ ನಿರತಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಹುಬ್ಬಳ್ಳಿಯಲ್ಲಿ ನಿರಶನ ಕೂರಲಿದ್ದಾರೆ. ಇನ್ನುಳಿದಂತೆ ಬಿಜೆಪಿ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿರಶನ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್‌ನಿಂದಲೂ ಉಪವಾಸ: ಸಂಸತ ಕಲಾಪ ಭಂಗವಾಗಿದ್ದನ್ನು ಪ್ರತಿಭಟಿಸಿ ಕಾಂಗ್ರೆಸ್‌ ನಾಯಕರು ಏ.9ರಂದು ಉಪವಾಸ ಸತ್ಯಾಗ್ರಹ ನಡೆಸಿದ್ದರು.

click me!