BSY ಸಂಪುಟದಲ್ಲಿ ಡಿಸಿಎಂ ಸವದಿ ಏಕಾಂಗಿ

Published : Sep 10, 2019, 07:18 AM IST
BSY ಸಂಪುಟದಲ್ಲಿ ಡಿಸಿಎಂ ಸವದಿ ಏಕಾಂಗಿ

ಸಾರಾಂಶ

ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಮೂಲಕ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿರುವ ಲಕ್ಷ್ಮಣ ಸವದಿ ಇದೀಗ ಹೆಚ್ಚೂ ಕಡಿಮೆ ಏಕಾಂಗಿಯಾಗಿದ್ದಾರೆ. ಅವರಿಂದ ಎಲ್ಲರೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ವಿಜಯ್‌ ಮಲಗಿಹಾಳ

ಬೆಂಗಳೂರು [ಸೆ.10]:  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಪಕ್ಷದ ಹೈಕಮಾಂಡ್‌ ಸೂಚನೆ ಮೇರೆಗೆ ಕೇವಲ ಸಚಿವ ಸ್ಥಾನವಲ್ಲದೆ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಮೂಲಕ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿರುವ ಲಕ್ಷ್ಮಣ ಸವದಿ ಇದೀಗ ಹೆಚ್ಚೂ ಕಡಿಮೆ ಏಕಾಂಗಿಯಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಅಭಿಪ್ರಾಯಪಟ್ಟಿವೆ.

ಸಂಪುಟ ಸೇರುವವರೆಗೆ ಮಿತ್ರರಂತಿದ್ದ ಹಲವು ಹಾಲಿ ಸಚಿವರು ಹಾಗೂ ಹಲ ಶಾಸಕರು ಈಗ ಲಕ್ಷ್ಮಣ ಸವದಿ ಅವರೊಂದಿಗೆ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಈ ಅನಪೇಕ್ಷಿತ ಬೆಳವಣಿಗೆಯಿಂದ ಸವದಿ ಬೇಸರಗೊಂಡಿದ್ದಾರೆ ಎಂದು ಅವರ ಆಪ್ತರು ಅಲವತ್ತುಕೊಂಡಿದ್ದಾರೆ.

ಮೂವರು ಉಪಮುಖ್ಯಮಂತ್ರಿಗಳ ಪೈಕಿ ಗೋವಿಂದ ಕಾರಜೋಳ ಮತ್ತು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಸಿಕ್ಕಷ್ಟುಪ್ರಾಶಸ್ತ್ಯ ಹಾಗೂ ಪ್ರಾತಿನಿಧ್ಯ ಲಕ್ಷ್ಮಣ ಸವದಿ ಅವರಿಗೆ ಸಿಗುತ್ತಿಲ್ಲ ಎಂಬ ಅಂಶ ಇದೀಗ ಪಕ್ಷದ ಆಂತರಿಕ ವಲಯದಲ್ಲಿ ಅಷ್ಟೇ ಅಲ್ಲ ಸಾರ್ವಜನಿಕವಾಗಿಯೂ ಗೋಚರವಾಗುತ್ತಿದೆ.

ಈ ಬೆಳವಣಿಗೆಯನ್ನು ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮಧ್ಯಪ್ರವೇಶ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.

ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರಿಗೆ ಮನಸ್ಸಿಲ್ಲದಿದ್ದರೂ ಪಕ್ಷದ ಹೈಕಮಾಂಡ್‌ ಹಾಗೂ ಸಂಘ ಪರಿವಾರದ ಪ್ರಮುಖರು ತಮ್ಮದೇ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸುವ ನಿರ್ಧಾರ ಕೈಗೊಂಡರು. ಅದಕ್ಕೂ ಮೊದಲೇ ಅವರನ್ನು ಪಕ್ಷದ ವತಿಯಿಂದ ನೆರೆಯ ಮಹಾರಾಷ್ಟ್ರದ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಅದು ಕೂಡ ಹೈಕಮಾಂಡ್‌ನ ತೀರ್ಮಾನವಾಗಿತ್ತು.

ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಕರೆದು ಉಪಮುಖ್ಯಮಂತ್ರಿಯಂಥ ಪ್ರಮುಖ ಸ್ಥಾನ ನೀಡಿರುವುದರ ಹಿಂದೆ ವರಿಷ್ಠರ ನಿರ್ದಿಷ್ಟ‘ಕಾರಣ’ ಇದ್ದೇ ಇದೆ ಎಂಬ ಆತಂಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಿಗರಲ್ಲಿ ದಟ್ಟವಾಗಿ ಕಂಡು ಬರುತ್ತಿದೆ. ಇದೇ ಪ್ರಸಕ್ತ ಬೆಳವಣಿಗೆಗಳಿಗೆ ಪ್ರಮುಖ ಕಾರಣವಾಗಿರಬಹುದು ಎಂಬ ಅನುಮಾನವನ್ನು ಸರ್ಕಾರದ ಹಿರಿಯ ಸಚಿವರೊಬ್ಬರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ವ್ಯಕ್ತಪಡಿಸಿದರು.

ಹಾಗೆ ನೋಡಿದರೆ ಈ ಸ್ಥಾನ ಅಲಂಕರಿಸುವ ಮೊದಲು ಲಕ್ಷ್ಮಣ ಸವದಿ ಅವರು ಯಡಿಯೂರಪ್ಪ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದರು. ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ನಂತರ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ಸವದಿ ಅವರನ್ನು ನೇಮಿಸುವ ಮೂಲಕ ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದರು. ಇಂತಹ ಯಡಿಯೂರಪ್ಪನವರೇ ತಮ್ಮನ್ನು ಆಪ್ತ ವಲಯದಲ್ಲಿ ಸೇರಿಸಿಕೊಳ್ಳುತ್ತಿಲ್ಲ ಎಂದು ಸವದಿಯವರಿಗೆ ಅನ್ನಿಸಿದೆ ಎಂದು ಆಪ್ತವಲಯಗಳು ತಿಳಿಸಿವೆ.

ಸಂಪುಟ ವಿಸ್ತರಣೆಯಾದ ನಂತರ ಯಡಿಯೂರಪ್ಪ ಅವರು ಹಲವು ಬಾರಿ ದೆಹಲಿಗೆ ತೆರಳಿದರೂ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರನ್ನು ಕರೆದೊಯ್ಯಲಿಲ್ಲ. ಮುಖ್ಯವಾಗಿ ಕಳೆದ ವಾರ ಮುಂಬೈಗೆ ತೆರಳಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೊಂದಿಗೆ ರಾಜ್ಯದ ಕೃಷ್ಣಾ ಮತ್ತು ಮಹದಾಯಿ ನದಿ ನೀರಿನ ಹಂಚಿಕೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಆಗಲೂ ಯಡಿಯೂರಪ್ಪ ಅವರು ಲಕ್ಷ್ಮಣ ಸವದಿ ಅವರನ್ನು ಕೈಬಿಟ್ಟು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಮಾತ್ರ ಕರೆಯೊದ್ದಿದ್ದ ಅಂಶ ವರಿಷ್ಠರ ಮಟ್ಟದಲ್ಲೂ ಪ್ರಸ್ತಾಪವಾಗಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್