ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲಿ - ಸರ್ಕಾರ ನಡೆಸುತ್ತೇವೆ : BSY

By Web DeskFirst Published Jun 7, 2019, 12:53 PM IST
Highlights

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬರ ಪ್ರವಾಸ ಆರಂಭ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಬಗ್ಗೆಯೂ ಅವರು ಪ್ರಸ್ತಾಪ ಮಾಡಿದ್ದಾರೆ. 

ಹುಬ್ಬಳ್ಳಿ : ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಇದೊಂದು ಅರ್ಥವಿಲ್ಲದ ಕಾರ್ಯಕ್ರಮ ಎಂದು ಹೇಳಿದರು. 

ಹುಬ್ಬಳ್ಳಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬರ ಪ್ರವಾಸ ಆರಂಭ ಮಾಡಿದ್ದು, ಈ ವೇಳೆ ಮಾತನಾಡಿದ ಅವರು ಈ ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಸೂಕ್ತ ಅನುದಾನವನ್ನು ನೀಡಿಲ್ಲ. ಗ್ರಾಮ ವಾಸ್ತವ್ಯ ಬಿಟ್ಟು ಬರಗಾಲ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಎಂದರು. 

ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ದೊಂಬರಾಟವಿದು. ರಾಜ್ಯದ ಜನ ಇದಕ್ಕೆಲ್ಲ ಬೆಲೆ ಕೊಡುವುದಿಲ್ಲ. ಜನರನ್ನು ವಂಚಿಸಿ ಪರಸ್ಪರ ಕಚ್ಚಾಟ, ಬಡಿದಾಟದಲ್ಲಿ ತೊಡಗಿದ್ದಾರೆ ಎಂದರು. 

ಇನ್ನು ಇದೇ ವೇಳೆ ಮಧ್ಯಂತರ ಚುನಾವಣೆ ಸಂಬಂಧ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಬಿಎಸ್ ವೈ ಯಾವುದೇ ಕಾರಣಕ್ಕೂ ಚುನಾವಣೆ ನಡೆಯುವುದಿಲ್ಲ. ಅಧಿಕಾರ‌‌ ಮಾಡಲು ಆದರೆ ಮಾಡಲಿ, ಆಗದಿದ್ದರೆ ಬಿಟ್ಟು ಹೋಗಲಿ. ನಮಗೆ ಬಿಟ್ಟು ಕೊಡಲಿ ನಾವು ಅಧಿಕಾರ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಹೊಸ ಚುನಾವಣೆಗೆ ಹೋಗುವ ಪ್ರಶ್ನೆಯಿಲ್ಲ. ನಾವು ಅದನ್ನು ಒಪ್ಪುವುದೂ ಇಲ್ಲ. ಜನರ ಬಳಿ ಹೋಗಲು ಇನ್ನೂ ಐದುವರ್ಷ ಬಾಕಿಯಿದೆ. ಈ ಸರ್ಕಾರ ಬಹಳ ದಿನ ಇರುತ್ತೆ ಅಂತಾ ಯಾರಿಗೂ ವಿಶ್ವಾಸವಿಲ್ಲ ಎಂದರು. 

ಇನ್ನು ಕೇಂದ್ರ ಸರ್ಕಾರದಲ್ಲಿ ಲಿಂಗಾಯತರಿಗೆ ಅವಕಾಶ ವಿಚಾರದ ಸಂಬಂಧವೂ ಪ್ರತಿಕ್ರಿಯಿಸಿದ ಅವರು ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಚಾರ ಎಂದರು. 

ಅಲ್ಲದೇ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರಾ ಎನ್ನುವ ಬಗ್ಗೆ ಬಿಎಸ್ ವೈ ಪ್ರತಿಕ್ರಿಯಿಸಿ ಅವರನ್ನು ನಮ್ಮ ಪಕ್ಷಕ್ಕೆ ಸೇರುವಂತೆ ಅಪ್ರೋಚ್ ಮಾಡಿಲ್ಲವೆಂದು ಯಡಿಯೂರಪ್ಪ ತಿಳಿಸಿದರು. 

click me!