
ಮಡಿಕೇರಿ/ಕಾರವಾರ : ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ವಿರುದ್ಧ ರಾಜ್ಯ ರಾಜಧಾನಿಯಲ್ಲಿ ಶುಕ್ರವಾರ 14 ದಿನಗಳ ‘ಬೆಂಗಳೂರು ಸುರಕ್ಷಾ ಯಾತ್ರೆ’ಗೆ ಚಾಲನೆ ನೀಡಿರುವ ಬಿಜೆಪಿ, ಶನಿವಾರದಿಂದ 4 ದಿನಗಳ ‘ಜನ ಸುರಕ್ಷಾ ಯಾತ್ರೆ’ಗೆ ಚಾಲನೆ ನೀಡಲಿದೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಆಯೋಜಿಸಿರುವ ‘ಮಂಗಳೂರು ಚಲೋ’ ಕಾರ್ಯಕ್ರಮದ ಅಂಗವಾಗಿ ಈ ಯಾತ್ರೆ ನಡೆಯುತ್ತಿದ್ದು, ಇದಕ್ಕೆ ಕೊಡಗು ಜಿಲ್ಲೆಯ ಕುಶಾಲನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಿಂದ ಏಕಕಾಲದಲ್ಲಿ ಚಾಲನೆ ಸಿಗಲಿದೆ.
ಕೇರಳದಲ್ಲಿ ಕಳೆದ ವರ್ಷ ಆಯೋಜಿಸಿದ್ದ ರಾರಯಲಿಯ ಮಾದರಿಯಲ್ಲಿ ಆರಂಭಿಸಿರುವ ಈ ನಾಲ್ಕು ದಿನಗಳ ಯಾತ್ರೆ ಮಾ.6ರಂದು ಮಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಅಂದು ಸಂಜೆ 4.30ಕ್ಕೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾರೋಪ ಭಾಷಣ ಮಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಕೊಡಗಿನಲ್ಲಿ ಡಿವಿಎಸ್ ಚಾಲನೆ: ಕೊಡಗಿನ ಮೂಲಕ ಆಯೋಜಿಸಿರುವ ಯಾತ್ರೆಗೆ ಬೆಳಗ್ಗೆ 10ಕ್ಕೆ ಕುಶಾಲನಗರದ ಕಾರು ನಿಲ್ದಾಣದ ವೇದಿಕೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಯಾತ್ರೆ ಉದ್ಘಾಟಿಸುವರು. ಕುಶಾಲನಗರದಲ್ಲಿ ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಅವರ ತಂದೆ ಚಂದಪ್ಪ ಪೂಜಾರಿ ಅವರು ಬಿಜೆಪಿ ಧ್ವಜ ಪ್ರದರ್ಶಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಾದಯಾತ್ರೆ ಕುಶಾಲನಗರದಿಂದ ಗುಡ್ಡೆಹೊಸೂರುವರೆಗೆ ನಡಿಗೆಯಲ್ಲಿ ಸಾಗಲಿದೆ. ನಂತರ ಯಾತ್ರೆಯ ವಾಹನ ಮಡಿಕೇರಿಯತ್ತ ಸಾಗಲಿದೆ. ಮಡಿಕೇರಿ ನಗರಕ್ಕೆ ಮಧ್ಯಾಹ್ನ 2.30ಕ್ಕೆ ಪ್ರವೇಶಿಸಲಿರುವ ಸುಮಾರು 4.5 ಕಿ.ಮೀ.ನಷ್ಟುದೂರ ಪಾದಯಾತ್ರೆ ಸಾಗಲಿದೆ. ಸಂಜೆ 4ಕ್ಕೆ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಾ.4ರಂದು ಬೆಳಗ್ಗೆ 9ಕ್ಕೆ ಪಾದಯಾತ್ರೆ ಮಡಿಕೇರಿ-ಸುಳ್ಯ ಗಡಿಯಲ್ಲಿರುವ ಪೆರಾಜೆಯ ಮೂಲಕ ದ.ಕ. ಜಿಲ್ಲೆ ಪ್ರವೇಶಿಸಲಿದೆ.
ಅಂಕೋಲಾದಲ್ಲಿ ಜಾವಡೇಕರ್: ಉತ್ತರ ಕರ್ನಾಟಕದ ಅಂಕೋಲಾದ ಅಜ್ಜಿಕಟ್ಟಾದಲ್ಲಿ ಬೆಳಗ್ಗೆ 10ಕ್ಕೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ರಾರಯಲಿಯು ಅಂಕೋಲಾದಿಂದ ಮಂಗಳೂರು ಕಡೆಗೆ ಸಾಗಲಿದೆ. ಮಾ.4ರ ಬೆಳಗ್ಗೆ 10.30ಕ್ಕೆ ಹೊನ್ನಾವರ, ಭಟ್ಕಳ, ಮುರ್ಡೇಶ್ವರದಲ್ಲಿ ಪಾದಯಾತ್ರೆ ನಡೆಯಲಿದ್ದು ಅಂದಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಸಂತೋಷ್‌ಜಿ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಈಶ್ವರಪ್ಪ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.