ನಗರ ಸ್ಥಳೀಯ ಚುನಾವಣೆ : ಬಿಜೆಪಿಗೆ ನಿರಾಸೆಯಿಲ್ಲ!

By Web DeskFirst Published Sep 4, 2018, 9:22 AM IST
Highlights

ಪ್ರತಿಪಕ್ಷದಲ್ಲಿದ್ದೂ 2 ನೇ ದೊಡ್ಡ ಪಕ್ಷವಾಗಿ ಬಿಜೆಪಿ ಗೆದ್ದಿದ್ದಕ್ಕೆ ಸಮಾಧಾನ | ನಗರ ಪ್ರದೇಶದಲ್ಲಿ ಪ್ರಭಾವ ಕುಸಿದಿದ್ದರಿಂದ ಕೊಂಚ ಹಿನ್ನಡೆ | ಬಿಜೆಪಿಗೆ ನಿರಾಸೆಯಿಲ್ಲ ಚೂರು ಆತಂಕ ಶುರು 

ಬೆಂಗಳೂರು (ಸೆ. 04): ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಿಜೆಪಿಯಲ್ಲಿ ಹೆಚ್ಚು ಸಮಾಧಾನ ತರದಿದ್ದರೂ ನಿರಾಸೆಯನ್ನಂತೂ ಉಂಟು ಮಾಡಿಲ್ಲ. ಆದರೆ, ಮೊದಲಿನಿಂದಲೂ ನಗರ ಪ್ರದೇಶದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚು ಎಂಬ ಮಾತನ್ನು ಈ ಫಲಿತಾಂಶ ಹುಸಿಗೊಳಿಸಿದ್ದರಿಂದ ಒಂದಿಷ್ಟು ಆತಂಕವೂ ಪಕ್ಷದ ಪಾಳೆಯದಲ್ಲಿ ಕಾಣಿಸಿಕೊಂಡಿದೆ.

ಕಳೆದ ಮೂರು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆದರೆ, ಸಮ್ಮಿಶ್ರ ಸರ್ಕಾರದ ಅಲೆಯನ್ನು ಎದುರಿಸಿ ಹೆಚ್ಚು ಸ್ಥಾನ ಗಳಿಸಿದ್ದು ಮಾತ್ರ ನೆಮ್ಮದಿ ತಂದಿದೆ. ಜೊತೆಗೆ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.

ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಮುಖಂಡರ ಆಂತರಿಕ ತಿಕ್ಕಾಟದ ಪರಿಣಾಮ ಸೋಲುಂಟಾಗಿರುವುದು, ಬಂಡಾಯವನ್ನು ಶಮನಗೊಳಿಸುವಲ್ಲಿ ವಿಫಲವಾಗಿದ್ದರಿಂದ ಹಿನ್ನೆಡೆ ಉಂಟಾಗಿರುವುದು ಪಕ್ಷದ ಹಿರಿಯ ನಾಯಕರ
ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಅಂಥ ಕಡೆಗಳಲ್ಲಿನ ಮುಖಂಡರನ್ನು ಕರೆಸಿ ಮುಂಬರುವ ಲೋಕಸಭಾ ಚುನಾವಣೆಗೆ ಅಣಿಗೊಳಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ನಗರ ಪ್ರದೇಶಗಳಲ್ಲಿ ಮುಸ್ಲಿಂ ಮತ್ತು ಇತರ ಹಿಂದುಳಿದ ವರ್ಗಗಳ ಮತದಾರರು ಬಿಜೆಪಿಯನ್ನು ದೂರವಿರಿಸಿ ಕಾಂಗ್ರೆಸ್ಸಿಗೆ ಹೆಚ್ಚು ಬೆಂಬಲ ನೀಡಿರುವುದು ಈ ಫಲಿತಾಂಶದಿಂದ ಗೊತ್ತಾಗಿದೆ. ಹೀಗಾಗಿ, ಇತರ ಹಿಂದುಳಿದ ವರ್ಗಗಳನ್ನು ಸೆಳೆಯುವ ಮೂಲಕ ಹಿಂದೂ ಮತಗಳನ್ನು ಕ್ರೋಢೀಕರಿಸುವ ಲೆಕ್ಕಾಚಾರವೂ ಬಿಜೆಪಿಯಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ನ ಭದ್ರಕೋಟೆ ಎಂದೇ ಪರಿಗಣಿಸಲ್ಪಡುವ ಹಾಸನದಲ್ಲಿ ಬಿಜೆಪಿ ಜಯದ ನಗೆ ಬೀರಿದೆ. ಹಾಸನ ನಗರ ಸಭೆಯಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ. ಹಾಸನದ ಸ್ಥಳೀಯ ಶಾಸಕ ಬಿಜೆಪಿಯವರೇ ಆಗಿರುವುದರಿಂದ ಆ ಪಕ್ಷಕ್ಕೆ ಹೆಚ್ಚು ಸ್ಥಾನ ಬಂದಿರಬಹುದು ಎಂದು ಹೇಳಬಹುದಾದರೂ ಇದು ಉತ್ತಮ ಸಾಧನೆಯೇ ಸರಿ.

ಮುಂಬರುವ ಲೋಕಸಭಾ ಚುನಾವಣೆಗೆ ಈ ಫಲಿತಾಂಶವನ್ನು ಮುಂದಿಟ್ಟುಕೊಂಡು ತಂತ್ರ ರೂಪಿಸಲು ಬಿಜೆಪಿ ಮುಂದಾಗಿದ್ದು, ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇನ್ನುಳಿದ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಸೋಲುಂಟಾಗಿದೆ? ಎಲ್ಲೆಲ್ಲಿ ನಿರೀಕ್ಷೆಯಂತೆ ಮತ ಗಳಿಕೆಯಾಗಿಲ್ಲವೋ ಅಂಥ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಮುಂದಾಗಲು ನಿರ್ಧರಿಸಿದ್ದಾರೆ.

click me!