ಬಿಜೆಪಿ ಹೈ ಕಮಾಂಡ್ ನಿಂದ ರಾಜ್ಯ ನಾಯಕರಿಗೆ ಖಡಕ್ ಎಚ್ಚರಿಕೆ

Published : Jul 07, 2018, 12:11 PM IST
ಬಿಜೆಪಿ ಹೈ ಕಮಾಂಡ್ ನಿಂದ ರಾಜ್ಯ ನಾಯಕರಿಗೆ ಖಡಕ್ ಎಚ್ಚರಿಕೆ

ಸಾರಾಂಶ

ಒಮ್ಮೆ ರಾಜ್ಯ ರಾಜಕಾರಣದಲ್ಲಿ ಎಡವಿದ್ದು ಸಾಕು, ಮತ್ತೊಮ್ಮೆ ಎಡವಲು ಹೋಗಬೇಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈ ಕಮಾಂಡ್ ಖಡಕ್ ಎಚ್ಚರಿಕೆಯೊಂದನ್ನು ರವಾನೆ ಮಾಡಿದೆ. 

ವಿಜಯ್ ಮಲಗಿಹಾಳ

ಬೆಂಗಳೂರು : ಸರ್ಕಾರ ರಚಿಸುವ ಸಂಬಂಧ ಮತ್ತೊಮ್ಮೆ ಪ್ರಯತ್ನ ಮಾಡಲು ಹೋಗಿ ಎಡವಬೇಡಿ, ಎಚ್ಚರಿಕೆ ವಹಿಸಿ ಎಂಬ ಸಲಹೆಯನ್ನು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ರವಾನಿಸಿದೆ. 

ಈಗಾಗಲೇ ಒಂದು ಬಾರಿ ಎಚ್ಚರ ತಪ್ಪಿದ್ದೇ ಸಾಕು. ಪಕ್ಷಕ್ಕೆ ಬರುವುದಾಗಿ ಹೇಳಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರಿಂದ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ, ಅಂಥ ಶಾಸಕರೊಂದಿಗೆ ಮಾತನಾಡಿ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಹಿತವಚನ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಸದ್ಯದ ಪರಿಸ್ಥಿತಿಯಲ್ಲಿ ಆಪರೇಷನ್ ಕಮಲದಂಥ ಸಾಹಸಕ್ಕೆ ಕೈಹಾಕುವುದು ಬೇಡವೇ ಬೇಡ. ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳು ದಿನಗಳೆದಂತೆ ಅವರ ನಡುವೆಯೇ ಭಿನ್ನಾಭಿಪ್ರಾಯ ಬಂದು ಪತನವಾದರೆ ಆಗಲಿ. ಆಗ ನೋಡೋಣ. ಆದರೆ, ಬಿಜೆಪಿಯೇ ಪತನಗೊಳಿಸಿತು ಎಂಬ ಕೆಟ್ಟ ಹೆಸರು
ಬರುವುದು ಮಾತ್ರ ಬೇಡ. ಅದು ಮುಂಬರುವ ಲೋಕಸಭಾ ಚುನಾವಣೆ ವೇಳೆ ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು  ಮಾಡಬಹುದು ಎಂಬ ಆತಂಕವನ್ನೂ ವರಿಷ್ಠರು ವ್ಯಕ್ತಪಡಿ ಸಿದ್ದಾರೆ ಎನ್ನಲಾಗಿದೆ.

ಇದು ತಂತ್ರಜ್ಞಾನದ ಯುಗವಾಗಿದ್ದರಿಂದ ಮೊಬೈಲ್ ಅಥವಾ ಹಿಡನ್ ಕ್ಯಾಮೆರಾ ಸಹಾಯ ದಿಂದ ಬಿಜೆಪಿಯನ್ನು ಬಲಿಪಶು ಮಾಡುವ  ಯತ್ನ
ನಡೆಯಬಹುದು. ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರು ಬಿಜೆಪಿ ಶಾಸಕರು, ಮುಖಂಡರನ್ನು ಸಂಪರ್ಕಿಸಿ ಪಕ್ಷಕ್ಕೆ ಬರುವ ಒಲವು ತೋರುವ  ಖೆಡ್ಡಾ ನಿರ್ಮಿಸಬಹುದು. ಅಂಥ ಸಂದರ್ಭದಲ್ಲಿ ಆತುರಕ್ಕೆ ಬಿದ್ದು ಏನೇನೋ ಮಾತನಾಡುವುದಾಗಲಿ ಅಥವಾ ಆಮಿಷ ಒಡ್ಡುವುದಾಗಲಿ ಮಾಡಬೇಡಿ. ಅದನ್ನು ಅವರು ರೆಕಾರ್ಡ್ ಮಾಡಿಕೊಳ್ಳಬಹುದು. ಹೀಗಾಗಿ, ಅವರು ಹೇಳುವುದನ್ನು ಕೇಳಿಸಿಕೊಳ್ಳಿ. ಅದನ್ನು ಖಚಿತಪಡಿಸಿಕೊಂಡ ನಂತರ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ನಂತರ ಮುಂದಿನ ಹೆಜ್ಜೆ ಇಡುವುದು ಸೂಕ್ತ ಎಂಬ ಕಿವಿಮಾತನ್ನು ಹೇಳಿದ್ದಾರೆ.

ವರಿಷ್ಠರ ಈ ಎಚ್ಚರಿಕೆಯ ಸಲಹೆ ನೀಡಿದ ಕಾರಣ ಕ್ಕಾಗಿಯೇ ರಾಜ್ಯ ನಾಯಕರೂ ಕಾಂಗ್ರೆಸ್ ಅಥವಾ ಜೆಡಿಎಸ್‌ನ ಶಾಸಕರನ್ನು ಸೆಳೆಯುವ  ಯಾವುದೇ ಪ್ರಯತ್ನ ನಡೆಸುವುದನ್ನು ಕೈಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಅನೇಕ ಪಕ್ಷಗಳು ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಮುಂದಾಗಿವೆ. ಶತಾಯ ಗತಾಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲ ಪ್ರಯತ್ನಗಳನ್ನೂ ಆ ಪಕ್ಷಗಳು ಮಾಡಬಹುದು ಎಂಬ ಅನುಮಾನ ಬಿಜೆಪಿ ವರಿಷ್ಠರಿಗೆ ಬಂದಿದೆಯಂತೆ. 

ಹೀಗಾಗಿಯೇ ಅದನ್ನು ರಾಜ್ಯ ನಾಯಕರ ಕಿವಿಗೆ ತಲುಪಿಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ಕಳೆದ ಬಾರಿ ಆದಂತೆ ಏಮಾರಬೇಡಿ ಎಂಬ ಸಲಹೆಯನ್ನೂ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಕಳೆದ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸಂಖ್ಯಾಬಲದಲ್ಲಿ ನಂ.1 ಆಗಿದ್ದ ಬಿಜೆಪಿಯ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ಶಾಸಕರನ್ನು ಸಂಪರ್ಕಿಸಿ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದರು. ಆದರೆ, ಆ ಕುರಿತು ನಡೆದ ಸಂಭಾಷಣೆಯನ್ನು ಮೊಬೈಲ್ ಮೂಲಕ ಧ್ವನಿ ಹಾಗೂ ಕ್ಯಾಮೆರಾ ಬಳಸಿ ದೃಶ್ಯ ಸೆರೆಹಿಡಿದಿದ್ದ ಕೆಲವು ಶಾಸಕರು ಅದನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಿದ್ದರು. ಈ ಬಗ್ಗೆ ಬಿಜೆಪಿಯನ್ನು ಇತರ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು. ಇದು ಬಿಜೆಪಿ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡಿತ್ತು. ಹೀಗಾಗಿ, ಇದು ಪುನರಾವರ್ತನೆ ಆಗುವುದು ಬೇಡ ಎಂಬುದು ಬಿಜೆಪಿ ವರಿಷ್ಠರ ನಿಲುವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!