ಬಿಜೆಪಿ ಸರ್ಕಾರ ಇನ್ನೂ 2 ವರ್ಷ ಇರಲಿ: ಜೆಡಿಎಸ್‌ ಶಾಸಕ!

By Web DeskFirst Published Sep 21, 2019, 10:55 AM IST
Highlights

ಬಿಜೆಪಿ ಸರ್ಕಾರ ಇನ್ನೂ 2 ವರ್ಷ ಇರಲಿ ಎಂದ ಜೆಡಿಎಸ್‌ ಶಾಸಕ!| ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ| ದೇವೇಗೌಡ ಹೇಳಿಕೆಗೆ ನಾಡಗೌಡ ವ್ಯತಿರಿಕ್ತ ಮಾತು

ಬೆಂಗಳೂರು[ಸೆ.21]: ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ. ಬಿಜೆಪಿ ಸರ್ಕಾರ ಇನ್ನೂ ಎರಡು ವರ್ಷ ಕೆಲಸ ಮಾಡಲಿ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ ಹೇಳಿದ್ದಾರೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಪದೇ ಪದೇ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಯಿದೆ ಎಂಬ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲಿ ಅವರದೇ ಪಕ್ಷದ ಶಾಸಕ ವ್ಯತಿರಿಕ್ತ ಹೇಳಿಕೆ ನೀಡಿರುವುದು ಕುತೂಹಲಕರವಾಗಿದೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ವರ್ಷಕ್ಕೊಂದು ಚುನಾವಣೆ ನಡೆಯುವುದು ಸೂಕ್ತವಲ್ಲ. ಗೊಂದಲದಿಂದ ನಮ್ಮ ಸರ್ಕಾರ ಬಿದ್ದು ಹೋಯಿತು ಎಂದರು.

ಮಧ್ಯಂತರ ಚುನಾವಣೆ ಬರುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಒಂದೇ ವರ್ಷದಲ್ಲಿ ಎರಡೆರಡು ಚುನಾವಣೆ ಎದುರಿಸುವುದು ಜನಪ್ರತಿನಿಧಿಗಳಿಗೆ ಕಷ್ಟವಾಗುತ್ತದೆ. ಹೀಗಾಗಿ ಬಿಜೆಪಿ ಸರ್ಕಾರ ಪತನವಾಗಬಾರದು. ಇನ್ನೂ ಎರಡು ವರ್ಷ ಕೆಲಸ ಮಾಡಲಿ ಎನ್ನುವ ಬಯಕೆ ಇದೆ. ಆದರೆ, ನಾವು ಈ ರೀತಿ ಹೇಳಿದರೆ ಬಿಜೆಪಿ ಪರ ಒಲವಿದೆ ಎಂದು ಅಲ್ಲ ಎಂದು ಸ್ಪಷ್ಟಪಡಿಸಿದರು.

ನೆರೆ ಪರಿಹಾರಕ್ಕೆ ಕೇಂದ್ರದಿಂದ ಒಂದು ಪೈಸೆ ಅನುದಾನ ಬಂದಿಲ್ಲ. ಈ ಬಗ್ಗೆ ಅಸಮಾಧಾನ ನಮಗೂ ಇದೆ. ಕೇಂದ್ರದಲ್ಲಿ ಅವರದೇ ಸರ್ಕಾರ ಇದ್ದರೂ ಅನುದಾನ ನೀಡಿಲ್ಲ. ಇದರಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೂ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಬಂಧಗಳು ಸರಿ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ನಾಡಗೌಡ ಅನುಮಾನ ವ್ಯಕ್ತಪಡಿಸಿದರು.

ಜೆಡಿಎಸ್‌ ಶಾಸಕರು ಬಿಜೆಪಿಗೆ ಹೋಗುವ ವದಂತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಯಾವುದೇ ಸೂಚನೆ ಇಲ್ಲ. ಪಕ್ಷದಲ್ಲಿ ಸಣ್ಣ ಪುಟ್ಟಅಸಮಾಧಾನಗಳು ಇರುವುದು ಸಹಜ. ಅವುಗಳನ್ನು ನಮ್ಮ ವರಿಷ್ಠರಾದ ದೇವೇಗೌಡರು ಬಗೆಹರಿಸುತ್ತಾರೆ ಎಂದರು.

click me!