
ಬೆಂಗಳೂರು [ಜು.30]: ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ಮರುದಿನವೇ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಗೆ ತಿಲಾಂಜಲಿ ಹಾಡಿದ್ದಾರೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ 2ನೇ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡು ಟಿಪ್ಪು ಜಯಂತಿ ಆಚರಣೆ ರದ್ದತಿಗೆ ಆದೇಶ ನೀಡಲಾಗಿದೆ.
ವಿರಾಜಪೇಟೆ ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳೆದ ಪತ್ರ ಬರೆದು ಟಿಪ್ಪು ಜಯಂತಿ ಆಚರಣೆ ರದ್ದತಿಗೆ ಮನವಿ ಮಾಡಿದ್ದರು. ಕೊಡಗಿನಲ್ಲಿ 2016ರಲ್ಲಿ ಟಿಪ್ಪು ಜಯಂತಿ ವೇಳೆ ಭಾರೀ ಗಲಭೆ ನಡೆದು ಕುಟ್ಟಪ್ಪ ಎನ್ನುವ ವ್ಯಕ್ತಿ ಸಾವಿಗೀಡಾಗಿದ್ದರು. ಟಿಪ್ಪು ಜಯಂತಿಯಿಂದ ಭಾರೀ ಹಿಂಸಾಚಾರ ನಡೆದು ಸಾಮರಸ್ಯ ಹಾಳಗುತ್ತದೆ, ಇದರಿಂದ ಟಿಪ್ಪು ಜಯಂತಿ ರದ್ದು ಮಾಡಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2016 ರ ನವೆಂಬರ್ 10 ರಂದು ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಆರಂಭಿಸಿತ್ತು. ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರವೂ ಕೂಡ ಇದನ್ನು ಮುಂದುವರಿಸಿತ್ತು. ದೋಸ್ತಿ ಸರ್ಕಾರ 14 ತಿಂಗಳ ಆಡಳಿತ ಬಳಿಕ ಪತನವಾಗಿದ್ದು, ಈಗ ಅಧಿಕಾರಕ್ಕೆ ಏರಿದ ನಾಲ್ಕು ದಿನದಲ್ಲೇ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯ ವಿರೋಧ : ಟಿಪ್ಪು ಸುಲ್ತಾನ್ ಜಯಂತಿ ರದ್ದತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡುವುದನ್ನು ಬಿಜೆಪಿ ರದ್ದು ಮಾಡಿರುವುದು ಅಪರಾಧ. ಒಬ್ಬ ಅಲ್ಪ ಸಂಖ್ಯಾತರು ಮಾತ್ರವಲ್ಲ ಮೈಸೂರು ರಾಜ್ಯದಲ್ಲಿ ರಾಜರಾಗಿದ್ದವರು ಟಿಪ್ಪು. ಮೈಸೂರು ರಾಜನಾಗಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಸ್ವಾತಂತ್ರ್ಯ ಪ್ರೇಮಿಯಾಗಿದ್ದರು.
ಮೈಸೂರು ಅಭಿವೃದ್ದಿಗೆ ಶ್ರಮಿಸಿದ ಅವರ ಜಯಂತಿ ಮನ್ನಾ ಮಾಡಲು ತೀರ್ಮಾನ ಮಾಡಿ, ಬಿಜೆಪಿಯವರು ದುರುದ್ದೇಶದಿಂದ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಇದನ್ನು ತಾವು ವಿರೋಧಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.