
ಬೆಂಗಳೂರು (ಡಿ.25): ಪಕ್ಷದಿಂದ ತುಸು ದೂರ ಉಳಿದಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಒಲವು ಗಳಿಸುವ ಉದ್ದೇಶ ದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಜಿಲ್ಲೆಯ ತಲಾ ಎರಡು ಕ್ಷೇತ್ರಗಳಲ್ಲಿ ಈ ವರ್ಗದವರಿಗೆ ಟಿಕೆಟ್ ನೀಡಬೇಕು ಪ್ರಸ್ತಾವನೆಯೊಂದು ಬಿಜೆಪಿ ಹೈಕಮಾಂಡ್ ತಲುಪಿದೆ.
ಇಂಥದೊಂದು ಪ್ರಸ್ತಾವನೆ ರೂಪದ ಮನವಿಯನ್ನು ಬಿಜೆಪಿಯ ರಾಜ್ಯ ಇತರ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ರಾಜ್ಯಕ್ಕೆ ಆಗಮಿಸಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಮುಂದಿಟ್ಟಿದ್ದಾರೆ. ಎರಡು ದಿನಗಳ ಹಿಂದೆ ಪಕ್ಷದ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡರ ಮಹತ್ವದ ಸಭೆ ನಡೆಸಿದ ಅರುಣ್ ಸಿಂಗ್ ಅವರು ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ
ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗಾಗಿ ಹಮ್ಮಿಕೊಂಡಿರುವ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಆ ಸಮುದಾಯಗಳ ಬೆಂಬಲ ಗಳಿಸಲು ಅನುಸರಿಸುತ್ತಿರುವ ತಂತ್ರದ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ತಿಳಿದು ಬಂದಿದೆ.
ಮೋರ್ಚಾದ ಉಸ್ತುವಾರಿಯೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸೇರಿದಂತೆ ಹಲವು ಹಿರಿಯ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರವೂ ಅನೌಪಚಾರಿಕವಾಗಿ ಅರುಣ್ ಸಿಂಗ್ ಅವರು ಕೆಲವು ಮುಖಂಡರೊಂದಿಗೆ ಹಿಂದುಳಿದ ವರ್ಗಗಳ ಒಲವು ಗಳಿಸುವ ಬಗ್ಗೆ ಆಪ್ತ ಮಾತುಕತೆ ನಡೆಸಿದರು ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಶಕ್ತಿಯೇ ಇತರ ಹಿಂದುಳಿದ ವರ್ಗಗಳು. ಆ ಹಿಂದುಳಿದ ವರ್ಗಗಳಲ್ಲಿ ಕೆಲವು ಸಮುದಾಯಗಳನ್ನು ಪಕ್ಷದತ್ತ ಸೆಳೆಯಲು ಅವಕಾಶವಿದೆ. ಅಂಥ ಸಮುದಾಯಗಳ ಮುಖಂಡರನ್ನು ಗುರುತಿಸಿ ಮುಂದೆ ತರಬೇಕು. ಜತೆಗೆ ಅನ್ಯ ಪಕ್ಷದಲ್ಲಿರುವ ಹಿಂದುಳಿದ ವರ್ಗಗಳ ಮುಖಂಡರನ್ನು ಪಕ್ಷಕ್ಕೆ ಕರೆತರಬೇಕು. ಇದೆಲ್ಲದರ ಮೂಲಕ ಇತರ ಹಿಂದುಳಿದ ವರ್ಗಗಳ ಜನತೆಗೆ ಸಂದೇಶ ರವಾನಿಸಬೇಕು ಎಂಬ ಸಲಹೆಯನ್ನು ರಾಜ್ಯ ನಾಯಕರು ನೀಡಿದ್ದಾರೆ ಎನ್ನಲಾಗಿದೆ.
ಪಕ್ಷದ ರಾಜ್ಯ ನಾಯಕರ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಇತರ ಹಿರಿಯ ನಾಯಕರ ಮುಂದಿಟ್ಟು ಚರ್ಚೆ ನಡೆಸಲಾಗುವುದು ಎಂಬ ಭರವಸೆಯನ್ನು ಅರುಣ್ ಸಿಂಗ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.