ಸಿದ್ದು ಸರ್ಕಾರದಲ್ಲಿ ಭಾರೀ ಭ್ರಷ್ಟಾಚಾರ, ಹಗರಣ

By Web DeskFirst Published Dec 7, 2018, 7:09 AM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಬಿಜೆಪಿ ಬಹುದೊಡ್ಡ ಭ್ರಷ್ಟಾಚಾರ ಆರೋಪ ಮಾಡಿದೆ. 2016-17ನೇ ಸಾಲಿನ ಬಜೆಟ್‌ನ ಖರ್ಚು ಮತ್ತು ವೆಚ್ಚದಲ್ಲಿ ಪೈಕಿ 35 ಸಾವಿರ ಕೋಟಿ ರುಪಾಯಿ ತಾಳೆಯಾಗದ ಕಾರಣ ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. 

ಬೆಂಗಳೂರು :  ಹಿಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ಭ್ರಷ್ಟಾಚಾರ, ಹಗರಣಗಳು ನಡೆದಿದ್ದು, 2016-17ನೇ ಸಾಲಿನ ಬಜೆಟ್‌ನ ಖರ್ಚು ಮತ್ತು ವೆಚ್ಚದಲ್ಲಿ ಪೈಕಿ 35 ಸಾವಿರ ಕೋಟಿ ರುಪಾಯಿ ತಾಳೆಯಾಗದ ಕಾರಣ ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

ಸಿಎಜಿ (ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ) ವರದಿಯಲ್ಲಿ ಪ್ರಸ್ತಾಪಿಸಲಾದ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಕುರಿತು ಅಂಕಿ-ಅಂಶಗಳನ್ನೊಳಗೊಂಡ ಕಿರುಹೊತ್ತಿಗೆಯನ್ನು ಗುರುವಾರ ವಿಧಾನಸೌಧದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಹೇರಾಫೇರಿ ಹೇಗೆ?:

2016-17ನೇ ಸಾಲಿನ ಬಜೆಟ್‌ ಒಟ್ಟು 1,86,052 ಕೋಟಿ ರು. ಆಗಿದ್ದು, ಬಳಕೆಯಾಗದೆ ಸರ್ಕಾರಕ್ಕೂ ಸಲ್ಲಿಕೆಯಾಗದಿರುವ ಮೊತ್ತವು 11,994.81 ಕೋಟಿ ರು. ಆಗಿದೆ. ಈ ಮೊತ್ತವು ಯಾರ ಮತ್ತು ಯಾವ ಇಲಾಖೆಯ ಬ್ಯಾಂಕ್‌ ಖಾತೆಯಲ್ಲಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರು ತನಿಖೆ ನಡೆಸಿ ನಾಡಿನ ಜನತೆಯ ಮುಂದಿಡಬೇಕು ಎಂದು ಒತ್ತಾಯಿಸಿದರು.

13,007 ಕೋಟಿ ರು. ಬಳಕೆಯಾಗಿಲ್ಲ. ವಿಧಾನಮಂಡಲದ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ರು. ಬಿಡುಗಡೆ ಮಾಡಲಾಗಿದೆ. ಬಡ್ಡಿ ಹಣದಲ್ಲಿ ಅಧಿಕಾರಿಗಳು ಮೋಜು-ಮಸ್ತಿ ಮಾಡಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ 115.10 ಕೋಟಿ ರು. ಹಗರಣವಾಗಿದೆ. ಆಡಳಿತಾತ್ಮಕ ಅನುಮೋದನೆ ಪಡೆಯದೆ 7,278.34 ಕೋಟಿ ರು. ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ಪೊಲೀಸ್‌ ಇಲಾಖೆ ಆಧುನಿಕರಣಕ್ಕೆ 68.5 ಕೋಟಿ ರು. ಕೇಂದ್ರದಿಂದ ಬಿಡುಗಡೆಯಾಗಿಲ್ಲ. ಕಾರಣವೆನೆಂದರೆ ರಾಜ್ಯ ಸರ್ಕಾರವು ಯುಟಿಲೈಸೇಷನ್‌ ಸರ್ಟಿಫಿಕೇಟ್‌ ನೀಡಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದರೂ 612 ಕೋಟಿ ರು. ಬಡ್ಡಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಅತ್ಯವಶ್ಯಕ ಹಣವನ್ನು ಬಳಕೆ ಮಾಡದೆ ಬ್ಯಾಂಕ್‌ನಲ್ಲಿಡುವ ಮೂಲಕ ಬಡ್ಡಿಯಿಂದ ಹಣ ಗಳಿಸಲು ಅಧಿಕಾರಿಗಳ ಜತೆ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಬಿಡುಗಡೆಯಾದ ಮೊತ್ತವನ್ನು ಬ್ಯಾಂಕ್‌ನಲ್ಲಿ ಇಡುವ ಮೂಲಕ ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದ್ದರೂ 612 ಕೋಟಿ ರು. ಬಡ್ಡಿ ಪಡೆದು ಅಧಿಕಾರಿಗಳು ಬೆಂಗಳೂರಿನ ಎಸಿ ಕೊಠಡಿಯಲ್ಲಿ ನೆಮ್ಮದಿಯಾಗಿರುವುದು ರಾಜ್ಯದ ಬಡ ಜನರಿಗೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದರು.

ಹೇಮಾವತಿ, ಕಣ್ವ, ಅರ್ಕಾವತಿ, ಶಿಂಷಾ, ಇಗ್ಗಲೂರು ಬ್ಯಾರೇಜ್‌ ಏತ ನೀರಾವರಿ ಮೂಲಕ 602ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ, 788 ಕೆರೆಗೆ ನೀರನ್ನು ತುಂಬಿಲ್ಲ. ಆದರೆ, 1433.41 ಕೋಟಿ ರು. ಯಾರ ಜೇಬಿಗೆ ಹೋಗಿದೆ ಎಂಬುದು ಗೊತ್ತಿಲ್ಲ. 14013 ಹೆಕ್ಟೇರುಗಳಿಗೆ ನೀರಾವರಿ ಒದಗಿಸಲು ಕೈಗೊಂಡ ಯೋಜನೆ ಪೂರ್ಣಗೊಂಡಿಲ್ಲ. ಪರಿಣಾಮ ರೈತರಿಗೆ ಮತ್ತು ಜನರಿಗೆ ನೀರು ದೊರೆತಿಲ್ಲ. ತೆರಿಗೇತರ ರಾಜಸ್ವ ಸಂಗ್ರಹಣೆಯು ಶೇ.5ರಿಂದ ಶೇ.4ಕ್ಕೆ ಇಳಿದಿದೆ. ರಾಜ್ಯದ ಸ್ವಂತ ಆದಾಯ 4 ವರ್ಷದಲ್ಲಿ ಕೇವಲ ಶೇ.33.19 ರಷ್ಟುಏರಿಕೆಯಾಗಿದೆ. ಸಾಲದ ಹೊರೆಯಲಿ ಭಾರೀ ಏರಿಕೆಯಾಗಿದೆ. ಸಾಲದ ಮೇಲಿನ ವಾರ್ಷಿಕ ಬಡ್ಡಿ 12,850 ಕೋಟಿ ರು. ಆಗಿದ್ದು, ಸರ್ಕಾರಕ್ಕೆ ಪಾವತಿಯಾಗದ ಮೊತ್ತವು 11,994.8 ಕೋಟಿ ರು.ಆಗಿದೆ. ಇದರಿಂದ ವಾರ್ಷಿಕ 960 ಕೋಟಿ ರು. ಹೆಚ್ಚುವರಿ ಬಡ್ಡಿ ಪಾವತಿ ಮಾಡುವಂತಾಗಿದೆ ಎಂದು ಆರೋಪಿಸಿದರು.

ಈ ಎಲ್ಲಾ ಮೊತ್ತ ಸೇರಿದರೆ 35 ಸಾವಿರ ಕೋಟಿ ರು. ಆದಾಯ-ಖರ್ಚು ವ್ಯತ್ಯಾಸ ಬರುತ್ತಿದೆ ಎಂದು ಅವರು ನುಡಿದರು.

ವಿಧಾನಸಭಾ ಚುನಾವಣಾ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಆಡಳಿತ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎಂದು ಕರೆದಿದ್ದು, ಈ ಎಲ್ಲಾ ಅವ್ಯವಹಾರಗಳನ್ನು ಸಾಬೀತುಪಡಿಸುತ್ತದೆ ಎಂದೂ ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಬಿಜೆಪಿ ಸಹ ವಕ್ತಾರ ಎ.ಎಚ್‌.ಆನಂದ್‌, ಮಾಧ್ಯಮ ವಿಭಾಗದ ಶಾಂತರಾಂ ಉಪಸ್ಥಿತರಿದ್ದರು.

ಬಿಜೆಪಿ ಆರೋಪಗಳು

- 2016-17ನೇ ಸಾಲಿನ ಬಜೆಟ್‌ ಒಟ್ಟು 1,86,052 ಕೋಟಿ, ಬಳಕೆಯಾಗದೇ-ಸಲ್ಲಿಕೆಯೂ ಆಗದೇ ಇರುವ ಮೊತ್ತ 11,994.81 ಕೋಟಿ

- ಬಳಕೆಯಾಗದೇ ಇರುವ ಮೊತ್ತ 13,007 ಕೋಟಿ ರು.

- ಜಲಸಂಪನ್ಮೂಲ ಇಲಾಖೆಯಲ್ಲಿ 375.55 ಕೋಟಿ ರು. ಲೂಟಿ

- ಲೋಕೋಪಯೋಗಿ ಇಲಾಖೆಯಲ್ಲಿ 166.43 ಕೋಟಿ ರು. ಅವ್ಯವಹಾರ

- ಶಿಕ್ಷಣ ಇಲಾಖೆ 54.35 ಕೋಟಿ ರು. ಅಕ್ರಮ

- ನಗಾರಭಿವೃದ್ಧಿ ಇಲಾಖೆಯಲ್ಲಿ 249.08 ಕೋಟಿ ರು. ಲೂಟಿ

- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 31.73 ಕೋಟಿ ರು. ಅಕ್ರಮ

- ವಿವಿಧ ಇಲಾಖೆಯಲ್ಲಿ 18.11 ಕೋಟಿ ರು. ಕಳವು

- ಪೊಲೀಸ್‌ ಆಧುನೀಕರಣಕ್ಕೆ ಕೇಂದ್ರದಿಂದ 290.98 ಕೋಟಿ ರು, ಸಿದ್ದು ಬಿಡುಗಡೆ ಮಾಡಿದ್ದು 222.48 ಕೋಟಿ, ಬಾಕಿ ಉಳಿಸಿದ್ದು 68.5 ಕೋಟಿ

- ಅರ್ಹತೆ ಇಲ್ಲದಿದ್ದರೂ ಎಫ್‌ಎಸ್‌ಎಲ್‌ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಮಾಡಿ ಭ್ರಷ್ಟಾಚಾರ

-5625 ಬಿಲ್ಲುಗಳಲ್ಲಿ ನೀರು ಬಳಕೆಯಾಗಿದ್ದರೂ ಬಿಲ್ಲಿನ ಮೊತ್ತ ಮಾತ್ರ ಶೂನ್ಯ 59 ಬಿಲ್ಲುಗಳಿಗೆ ಬಳಕೆದಾರರ ಹೆಸರು, ವಿಳಾಸಗಳೇ ಇಲ್ಲ.

- ಸಮವಸ್ತ್ರ ವಿತರಣೆಯಲ್ಲಿ ಭಾರೀ ಭ್ರಷ್ಟಾಚಾರ. ಶಾಲೆಯಲ್ಲಿ ಇಲ್ಲದ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿ ಅವ್ಯವಹಾರ

- ಕೃಷ್ಣಭಾಗ್ಯ ಜಲ ನಿಗಮ ನಿಯಮಿತ ಇದರ ಮೂಲಕ ಗುತ್ತಿಗೆ ಷರತ್ತುಗಳಿಗೆ ವಿರುದ್ಧವಾಗಿ 51.58 ಕೋಟಿ ರು. ಅಧಿಕ ಮೊತ್ತ ಮುಂಗಡ ಪಾವತಿ

- 4.82 ಕೋಟಿ ರು. ಮೊತ್ತ ಹೆಚ್ಚುವರಿಯಾಗಿ ಪಾವತಿಸಿ ಗುತ್ತಿಗೆದಾರರಿಗೆ ಅಕ್ರಮ ಲಾಭ

click me!