ಲೋಕಸಭೆ ಚುನಾವಣೆಗೆ ಬಿಜೆಪಿ ಬ್ರಹ್ಮಾಸ್ತ್ರವೇನು?

By Web DeskFirst Published Sep 30, 2018, 7:44 AM IST
Highlights

2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು 2019ರ ಚುನಾವಣೆಯಲ್ಲಿ ಜಯಿಸಬೇಕು ಎಂಬ ಗುರಿ ಹಾಕಿಕೊಂಡಿರುವ ಬಿಜೆಪಿ ಇದೀಗ ಗೆಲುವಿಗಾಗಿ ಹೊಸ ಅಸ್ತ್ರವನ್ನು ಸಿದ್ಧಮಾಡಿಕೊಂಡಿದೆ. 

ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು 2019ರ ಚುನಾವಣೆಯಲ್ಲಿ ಜಯಿಸಬೇಕು ಎಂಬ ಗುರಿ ಹಾಕಿಕೊಂಡಿರುವ ಬಿಜೆಪಿ, ಇದಕ್ಕಾಗಿ ಸ್ಮಾರ್ಟ್‌ ಫೋನ್‌ ಬಳಕೆದಾರರ ನೆಚ್ಚಿನ ‘ವಾಟ್ಸ್‌ಆ್ಯಪ್‌’ ಅನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಸಜ್ಜಾಗಿದೆ.

ದೇಶದಲ್ಲಿ 9,27,533 ಬೂತ್‌ಗಳು (ಮತಗಟ್ಟೆಗಳು) ಇದ್ದು, ಪ್ರತಿ ಮತಗಟ್ಟೆಗೂ ‘ಸೆಲ್‌ಫೋನ್‌ ಪ್ರಮುಖ್‌’ ಎಂಬ ಹುದ್ದೆಯನ್ನು ಸೃಷ್ಟಿಸಿ, ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್‌ ನೀಡಲು ಉದ್ದೇಶಿಸಿದೆ. ಈ ‘ಸೆಲ್‌ಫೋನ್‌ ಪ್ರಮುಖ್‌’ಗಳು ತಮ್ಮ ಮತಗಟ್ಟೆವ್ಯಾಪ್ತಿಯಲ್ಲಿ ಮೂರು ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಸೃಷ್ಟಿಮಾಡಬೇಕು. ಒಂದು ಗ್ರೂಪ್‌ನಲ್ಲಿ 256 ಮಂದಿಗಷ್ಟೇ ಗರಿಷ್ಠ ಅವಕಾಶವಿರುವುದರಿಂದ ಮೂರು ಗ್ರೂಪ್‌ಗಳನ್ನು ರಚಿಸಿ, ಮತದಾರರನ್ನು ಸೇರ್ಪಡೆ ಮಾಡಬೇಕು. ಆ ಗ್ರೂಪ್‌ಗಳಲ್ಲಿ ಬಿಜೆಪಿ ಪ್ರಚಾರಕ್ಕೆ ಸಂಬಂಧಿಸಿದ ವಿಡಿಯೋ, ಆಡಿಯೋ, ಸಂದೇಶ, ಗ್ರಾಫಿಕ್‌ ಹಾಗೂ ಕಾರ್ಟೂನ್‌ಗಳನ್ನು ಮತದಾರರಿಗೆ ರವಾನಿಸಬೇಕು ಎಂಬ ತಂತ್ರಗಾರಿಕೆಯನ್ನು ಬಿಜೆಪಿ ರೂಪಿಸಿದೆ. ಬರುವ ಜನವರಿಯಿಂದ ಈ ಪ್ರಚಾರ ಆರಂಭವಾಗಲಿದೆ.

ಮತಗಟ್ಟೆವ್ಯಾಪ್ತಿಯ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಮತದಾರರ ಪಟ್ಟಿಯಲ್ಲಿರುವ ಪ್ರತಿ ಪುಟಕ್ಕೂ ‘ಪೇಜ್‌ ಪ್ರಮುಖ್‌’ಗಳನ್ನು ಸೃಷ್ಟಿಸಿ, ಅವರ ಸೇವೆ ಬಳಸಿಕೊಂಡು ಹಲವು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಕಂಡಿದೆ. ಇದೀಗ ‘ಸೆಲ್‌ಫೋನ್‌ ಪ್ರಮುಖ್‌’ ಮೂಲಕ ನೇರವಾಗಿ ಮತದಾರರನ್ನು ತಲುಪಲು ಮುಂದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಾರಗಳ ಹಿಂದೆ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿದ್ದರು. ಆ ವೇಳೆ ನಾಯಕರಿಗೆ ವಾಟ್ಸ್‌ಆ್ಯಪ್‌ ಪ್ರಚಾರ ಅಸ್ತ್ರದ ಕುರಿತು ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಪ್ರಾತ್ಯಕ್ಷಿಕೆ ನೀಡಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಾಗೂ ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಯಕರೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಬೂತ್‌ ಕ್ರಿಯಾ ಯೋಜನೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಿದ್ಧಪಡಿಸಿದ್ದು, ಪ್ರತಿ ಮತಗಟ್ಟೆವ್ಯಾಪ್ತಿಯಲ್ಲಿ ಸ್ಮಾರ್ಟ್‌ಫೋನ್‌ ಬಳಸುವ ಮತದಾರರ ವಿವರ ನೀಡುವಂತೆ ರಾಜ್ಯ ಘಟಕಗಳಿಗೆ ಸೂಚನೆ ನೀಡಿದ್ದಾರೆ. ಆ ಪಟ್ಟಿಬರುತ್ತಿದ್ದಂತೆ, ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿಯ ಹಳೆಯ ಕೇಂದ್ರ ಕಚೇರಿಯಲ್ಲಿ ಮತದಾರರ ಸಂಖ್ಯೆಯನ್ನು ವಾಟ್ಸ್‌ಆ್ಯಪ್‌ ಪ್ರಚಾರಕ್ಕೆ ಬಳಸಿಕೊಳ್ಳುವ ತಯಾರಿ ನಡೆಯಲಿದೆ. ಬೂತ್‌ ಮಟ್ಟದಲ್ಲಿ ಸೆಲ್‌ಫೋನ್‌ ಪ್ರಮುಖ್‌ ಆಗಿ ಯಾರನ್ನು ನೇಮಿಸಬೇಕು ಎಂದು ಗುರುತಿಸುವಂತೆ ಸಂಸದರು, ಶಾಶಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ದೇಶದಲ್ಲಿ 114 ಕೋಟಿ ಮೊಬೈಲ್‌ ಫೋನ್‌ ಬಳಕೆದಾರರು ಇದ್ದು, 20 ಕೋಟಿ ಮಂದಿ ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾರೆ. ವಿಶೇಷ ಎಂದರೆ, ಬಿಜೆಪಿಯ ಪೇಜ್‌ ಪ್ರಮುಖ್‌ ಆಲೋಚನೆಯನ್ನು ಕಾಂಗ್ರೆಸ್‌ ಕೂಡ ಅಳವಡಿಸಿಕೊಂಡಿದ್ದು, ಬೂತ್‌ ಸಹಯೋಗಿ ಎಂಬ ಕಾರ್ಯಕ್ರಮ ರೂಪಿಸಿದೆ. ಅ.2ರಿಂದ ಪ್ರತಿ ಮನೆಮನೆಗೂ ಬೂತ್‌ ಸಹಯೋಗಿಗಳನ್ನು ಕಳುಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಹೊಸ ಅಸ್ತ್ರ ಕಂಡುಕೊಂಡಿದೆ.

click me!