ನಗರದಲ್ಲಿ ಹಕ್ಕಿ ಜ್ವರ – 865 ಕೋಳಿಗಳ ಹತ್ಯೆ

Published : Jan 05, 2018, 07:24 AM ISTUpdated : Apr 11, 2018, 01:00 PM IST
ನಗರದಲ್ಲಿ ಹಕ್ಕಿ ಜ್ವರ – 865 ಕೋಳಿಗಳ ಹತ್ಯೆ

ಸಾರಾಂಶ

ಬೆಂಗಳೂರಿನಲ್ಲಿ ಹಕ್ಕಿಜ್ವರ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಗುರುವಾರ ಕೇಂದ್ರ ಆರೋಗ್ಯ ಇಲಾಖೆಯ ಮೂವರು ಸದಸ್ಯರ ತಂಡ ಧಾವಿಸಿದ್ದು ಮುಂಜಾಗ್ರತಾ ಕ್ರಮ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಬೆಂಗಳೂರು (ಜ.05): ಬೆಂಗಳೂರಿನಲ್ಲಿ ಹಕ್ಕಿಜ್ವರ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಗುರುವಾರ ಕೇಂದ್ರ ಆರೋಗ್ಯ ಇಲಾಖೆಯ ಮೂವರು ಸದಸ್ಯರ ತಂಡ ಧಾವಿಸಿದ್ದು ಮುಂಜಾಗ್ರತಾ ಕ್ರಮ ಮತ್ತಷ್ಟು ಬಿಗಿಗೊಳಿಸಲಾಗಿದೆ. ನಗರದ ದಾಸರಹಳ್ಳಿಯ ಭುವನೇಶ್ವರಿನಗರದಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೇಂದ್ರ ತಂಡವು ಪಶುಸಂಗೋಪನಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸಂಜೆ ಸಭೆ ನಡೆಸಿ ಮಾಹಿತಿ ಪಡೆದಿದೆ. ಶುಕ್ರವಾರ ಬೆಳಗ್ಗೆ ಖುದ್ದು ದಾಸರಹಳ್ಳಿ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಲಿದ್ದು, ಮತ್ತಷ್ಟು ಮುನ್ನೆಚ್ಚರಿಕೆ ಕೈಗೊಳ್ಳುವ ಬಗ್ಗೆ ಸಲಹೆ ನೀಡುವ ಸಾಧ್ಯತೆ ಇದೆ.

ಗುರುವಾರ ಪಶುಸಂಗೋಪನೆ, ಆರೋಗ್ಯ, ಪೊಲೀಸ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಗಳನ್ನು ಒಳಗೊಂಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಿರುವ ವಿಶೇಷ ತಂಡಗಳ ಮುಖ್ಯಸ್ಥರೊಂದಿಗೆ ಕೇಂದ್ರದ ತಂಡ ಚರ್ಚೆ ನಡೆಸಿದೆ.

ಇದೇ ವೇಳೆ ಆರೋಗ್ಯ ಇಲಾಖೆಯು ದಾಸರಹಳ್ಳಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿದ್ದು, ಸೋಂಕು ಪತ್ತೆಯಾಗಿರುವಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಪ್ರದೇಶದ ಪ್ರತಿ ಮನೆಗೂ ಭೇಟಿ ನೀಡಿ ಹಕ್ಕಿ ಜ್ವರ, ಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಮಾಹಿತಿ ನೀಡಿದೆ. ಜತೆಗೆ ನಿಷೇಧಿತ ವಲಯದ ವ್ಯಾಪ್ತಿಯಲ್ಲಿ 865 ಕೋಳಿಗಳನ್ನು ನಾಶಪಡಿಸಿ ಸುಣ್ಣ ಬಳಿದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ.

ಗುರುವಾರ 650 ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ 28 ಮಂದಿ ಮಾಹಿತಿ ಪಡೆಯಲಾಗಿದ್ದು ಅವರ ಮೇಲೆ ನಿಗಾ ಇಡಲಾಗಿದೆ.  ಅಲ್ಲದೇ, ಕೋಳಿ ನಾಶಪಡಿಸಲು ಬಳಕೆಯಾದ ಹತ್ತು ಮಂದಿ ಸಿಬ್ಬಂದಿಯನ್ನು ಸಾರ್ವಜನಿಕರೊಂದಿಗೆ ಬೆರೆಯಲು ಬಿಡದೆ ನಿಗಾಕೇಂದ್ರದಲ್ಲಿ ಇಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಕಟ್ಟೆಚ್ಚರ: ಹಕ್ಕಿ ಜ್ವರ ವಲಸಿಗ ಹಕ್ಕಿಗಳಿಂದ ಬರುವುದರಿಂದ ರಾಜ್ಯಾದ್ಯಂತ ಪ್ರಮುಖ ಮೃಗಾಲಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಔಷಧಿಗಳ ಸಿಂಪಡಣೆ ಮಾಡಲಾಗಿದೆ. ಮೃಗಾಲಯಗಳ ಸುತ್ತಮುತ್ತಲಿನ ಫೌಲ್ಟ್ರಿ ಫಾರ್ಮ್‌ಗಳಲ್ಲಿನ ಕೋಳಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಹಕ್ಕಿ ಜ್ವರ ಪ್ರಮುಖವಾಗಿ ವಲಸಿಗರ ಹಕ್ಕಿಗಳಿಂದ ಹರಡುತ್ತದೆ. ಮೃಗಾಲಯಗಳಲ್ಲಿ ವಲಸಿಗ ಹಕ್ಕಿಗಳು ಇರುವುದಿಲ್ಲ. ಆದ್ಯಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಔಷಧಿಗಳ ಸಿಂಪಡಣೆಗೆ ಸೂಚಿಸಲಾಗಿದೆ. 2018ರ ಡಿಸೆಂಬರ್ ತಿಂಗಳಲ್ಲಿ ವಲಸಿಗ ಹಕ್ಕಿಗಳು ಜ್ವರದಿಂದ (ಎಚ್‌5ಎನ್‌8) ಮೃತ ಪಟ್ಟಿದ್ದವು. ಈ ವೇಳೆ ಮೈಸೂರು ಮೃಗಾಲಯವನ್ನು ಒಂದು ತಿಂಗಳ ಕಾಲ ಬಂದ್ ಮಾಡಲಾಗಿತ್ತು.

ಇಂತಹ ಪರಿಸ್ಥಿತಿ ಮರುಕಳಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುನ್ಸೂಚನೆ ನೀಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಇಂದು ಮನೆ, ಮನೆ ಪರಿಶೀಲನೆ: ಶುಕ್ರವಾರ 40 ತಂಡಗಳು 3 ಕಿ.ಮೀ. ವ್ಯಾಪ್ತಿಯಲ್ಲಿ 12 ಸಾವಿರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಿವೆ. ಇದೇ ವೇಳೆ ಕೇಂದ್ರದಿಂದ ಆಗಮಿಸಿರುವ ಪರಿಶೀಲನಾ ತಂಡವು ಶುಕ್ರವಾರ ದಾಸರಹಳ್ಳಿಯಲ್ಲಿ ಪರಿಶೀಲನೆ ನಡೆಸಲಿದೆ. ದಾಸರಹಳ್ಳಿಯ ಭುವನೇಶ್ವರಿನಗರ ಕೋಳಿ ಮಾಂಸ ಮಾರಾಟ ಅಂಗಡಿಯಲ್ಲಿನ ಕೋಳಿಗಳಿಗೆ ಕಾಣಿಸಿಕೊಂಡ ಹಕ್ಕಿ ಜ್ವರ ಬೇರೆ ಫಾರಂ ಮತ್ತು ಅಂಗಡಿಗಳಿಗೆ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಹಕ್ಕಿ ಜ್ವರ ಎಲ್ಲಿಂದ ಬಂತು ಎಂಬುದನ್ನು ಪತ್ತೆ ಮಾಡಲು ಕುಣಿಗಲ್, ಬನ್ನೇರಘಟ್ಟ ಸೇರಿ ಇನ್ನಿತರ ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ.

ಹಕ್ಕಿ ಜ್ವರ ಬೇರೆಡೆ ಹರಡದಂತೆ ತಡೆಯಲು ಎಲ್ಲಾ ಗ್ರಾಮ ಪಂಚಾಯತಿ ಗಳಿಗೂ ಪಶುಸಂಗೋಪನಾ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಅದರ ಜತೆಗೆ 2017ರ ಡಿ. 15ರಿಂದೀಚೆಗೆ ಕೋಳಿ ಸೇರಿ ಇನ್ನಿತರ ಕಾಡು ಪಕ್ಷಿಗಳು, ವಲಸೆ ಹಕ್ಕಿಗಳು ಅಸಹಜವಾಗಿ ಸಾವನ್ನಪ್ಪಿರುವುದು ಕಂಡು ಬಂದಿದ್ದರೆ ಅಂತಹವುಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಜ್ವರಕ್ಕೆ ಸಂಬಂಧಿಸಿದ ಅನುಮಾನಗಳನ್ನು ನಿವಾರಿಸಿಕೊಳ್ಳಲು ಸಹಾಯವಾಣಿ ಸ್ಥಾಪಿಸಲಾಗಿದೆ. ಟೋಲ್ ಫ್ರೀ ಸಂಖ್ಯೆ 1800 4250012, ದೂ.ಸಂ. 080 23414100ಗೆ ಕರೆ ಮಾಡಿ ಅನುಮಾನ ಮತ್ತು ಮಾಹಿತಿ ನೀಡಬಹುದಾಗಿದೆ. ಈವರೆಗೂ ಹಕ್ಕಿ ಜ್ವರದ ಲಕ್ಷಣ ಯಾರಲ್ಲೂ ಕಂಡು ಬಂದಿಲ್ಲ. ಆದಾಗ್ಯೂ ಯಲಹಂಕ ತಾಲೂಕು ಆಸ್ಪತ್ರೆಯಲ್ಲಿ ಹಕ್ಕಿ ಜ್ವರದ ಲಕ್ಷಣ ಕಂಡು ಬಂದವರ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ನಿಗದಿ ಮಾಡಲಾಗಿದೆ. 24/7 ಸೇವೆ ನೀಡಲು ವೈದ್ಯಾಧಿಕಾರಿಗಳ ತಂಡ ಸಿದ್ಧಗೊಳಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಗಳಿಗೆ ಜಾಗೃತರಾಗಿರಲು ತಿಳಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ ತಿಳಿಸಿದ್ದಾರೆ.

ಕೋಳಿ ಮಾಂಸದಿಂದ ಜ್ವರ ಬರಲ್ಲ : ಕೋಳಿ ಮಾಂಸ ಅಥವಾ ಮೊಟ್ಟೆ ಸೇವನೆಯಿಂದ ಮನುಷ್ಯರಿಗೆ ಹಕ್ಕಿ ಜ್ವರ ಬರುವುದಿಲ್ಲ. ಆದರೆ ಸೋಂಕು ತಗುಲಿದ ಕೋಳಿ ಮಾಂಸ ಚೆನ್ನಾಗಿ ಬೇಯಿಸದೆ ಹಾಗೂ ಹಸಿ ಮೊಟ್ಟೆ ಸೇವನೆಯಿಂದ ಕಾಯಿಲೆ ಬರುವ ಸಾಧ್ಯತೆ ಇದೆ. ಹೀಗಾಗಿ ಕೋಳಿ ಮಾಂಸವನ್ನು 70 ಡಿಗ್ರಿಯಷ್ಟು ಉಷ್ಣಾಂಶದಲ್ಲಿ ಬೇಯಿಸಿ ತಿನ್ನಬೇಕು. ಸೋಂಕಿತ ಹಸಿ ಮೊಟ್ಟೆ ಸೇವಿಸಬಾರದು. ಕೋಳಿ ಮಾಂಸ ಸಿದ್ಧಪಡಿಸಿದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಕೋಳಿಗಳಲ್ಲಿ ಲಕ್ಷಣ ಕಂಡ ಬಂದ ತಕ್ಷಣ ಟೋಲ್ ಫ್ರೀ 1056 ಸಂಖ್ಯೆಗೆ ಕರೆ ಮಾಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಧಾರ್‌ ಲಿಂಕ್‌ ಕಮಾಲ್‌, ಒಂದೇ ವರ್ಷದಲ್ಲಿ 3 ಕೋಟಿ ಫೇಕ್‌ IRCTC ಅಕೌಂಟ್‌ ಬಂದ್‌ ಮಾಡಿದ ಭಾರತೀಯ ರೈಲ್ವೇ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ