ಸಾವಿರಾರು ಕೋಟಿಯ ಒಡೆಯನ ಮಗ ದಿನಗೂಲಿ ಕಾರ್ಮಿಕನಾದ !

Published : Aug 12, 2017, 05:44 PM ISTUpdated : Apr 11, 2018, 12:49 PM IST
ಸಾವಿರಾರು ಕೋಟಿಯ ಒಡೆಯನ ಮಗ ದಿನಗೂಲಿ ಕಾರ್ಮಿಕನಾದ !

ಸಾರಾಂಶ

6000 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವ ಕಂಪನಿಗೆ ಪಾಲುದಾರರಾಗಿರುವ ಘನಶ್ಯಾಮ್ ಅವರ ಏಳನೇ ಪುತ್ರ ಹಿತಾರ್ಥ. ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ ಬರುತ್ತಿದ್ದಂತೆ ಆತನನ್ನು ಸೀದಾ ತಮ್ಮ ಕಂಪನಿಯಲ್ಲೇ ಉನ್ನತ ಹುದ್ದೆಗೆ ಘನಶ್ಯಾಮ ಅವರು ಕೂರಿಸಬಹುದಿತ್ತು.

ಹೈದರಾಬಾದ್(ಆ.12): ತಂದೆ ಸಹಸ್ರಾರು ಕೋಟಿ ರುಪಾಯಿ ಬೆಲೆಬಾಳುವ ಕಂಪನಿಯ ಒಡೆಯ. ಚೆನ್ನಾಗಿ ಕೆಲಸ ಮಾಡಿದ ನೂರಾರು ನೌಕರರಿಗೆ ಪ್ರತಿ ವರ್ಷ ಕಾರು, ಮನೆ, ಚಿನ್ನದ ಆಭರಣಗ ಳನ್ನು ಉಡುಗೊರೆ ರೂಪದಲ್ಲಿ ನೀಡುವ ವಜ್ರ ವ್ಯಾಪಾರಿಗಳ ಮನೆತನವದು. ಅಂತಹ ಕುಟುಂಬದಲ್ಲಿ ಜನಿಸಿ, ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದು, ಅಮೆರಿಕದಂತಹ ದೇಶದಲ್ಲಿ ಓದಿದ ಹುಡುಗನೊಬ್ಬ ಈಗ ಹೈದರಾಬಾದ್‌ನಲ್ಲಿ ಒಂದು ತಿಂಗಳು ಅಂಡಲೆದಿದ್ದಾನೆ.

ಎಂದೂ ನೋಡದ ಊರಿಗೆ 500 ರು.ನೊಂದಿಗೆ ಕಾಲಿಟ್ಟು ವಿವಿಧೆಡೆ ಸಣ್ಣಪುಟ್ಟ ಕೆಲಸ ಮಾಡಿ 5000 ರು. ಹಾಗೂ ಯಾವ ವಿವಿಯಲ್ಲೂ ಕಲಿಸದ ಅಪಾರ ಅನುಭವವನ್ನು ಸಂಪಾದಿಸಿದ್ದಾನೆ! ನಂಬಲು ಇದು ಅಚ್ಚರಿಯಾದರೂ ಇದು ನಿಜ. ದೀಪಾವಳಿ ಸಂದರ್ಭದಲ್ಲಿ ಗುಜರಾತಿನ ಹರೇ ಕೃಷ್ಣ ಡೈಮಂಡ್ ಎಕ್ಸ್‌ಪೋರ್ಟ್ ಕಂಪನಿ ತನ್ನ ಉದ್ಯೋಗಿಗಳಿಗೆ ಭರಪೂರ ಉಡುಗೊರೆ ನೀಡುವ ಮೂಲಕ ಸದ್ದು ಮಾಡುತ್ತದೆ. ಆ ಕಂಪನಿಯ ಸೃಷ್ಟಿಕರ್ತರು ಮೂವರು ಸೋದರರು. ಅವರಲ್ಲಿ ಒಬ್ಬರು ಘನಶ್ಯಾಮ ಧೋಲಾಕಿಯಾ. ಅವರ 21 ವರ್ಷದ ಪುತ್ರ ಹಿತಾರ್ಥ ಧೋಲಾಕಿಯಾ ಬಡತನ, ಹಣದ ಮೌಲ್ಯ ಹಾಗೂ ನಿರುದ್ಯೋಗಿಗಳ ಬವಣೆ ಅರಿಯಲು ಒಂದು ತಿಂಗಳ ಕಾಲ ಹೈದರಾಬಾದ್‌ನಲ್ಲಿ ಶ್ರೀಸಾಮಾನ್ಯ ಯುವಕನಂತೆ ಜೀವಿಸಿ, ಅನುಭವ ಗಳಿಸಿ ಗುಜರಾತ್‌ಗೆ ಮರಳಿದ್ದಾನೆ.

6000 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವ ಕಂಪನಿಗೆ ಪಾಲುದಾರರಾಗಿರುವ ಘನಶ್ಯಾಮ್ ಅವರ ಏಳನೇ ಪುತ್ರ ಹಿತಾರ್ಥ. ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ ಬರುತ್ತಿದ್ದಂತೆ ಆತನನ್ನು ಸೀದಾ ತಮ್ಮ ಕಂಪನಿಯಲ್ಲೇ ಉನ್ನತ ಹುದ್ದೆಗೆ ಘನಶ್ಯಾಮ ಅವರು ಕೂರಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಧೋಲಾಕಿಯಾ ಕುಟುಂಬದ ಹೆಸರು ಹಾಗೂ ಮೊಬೈಲ್ ಫೋನ್ ಬಳಸದೆ ಒಂದು ತಿಂಗಳು ಗೊತ್ತಿಲ್ಲದ ಊರಿನಲ್ಲಿ ಅನುಭವ ಪಡೆದುಕೊಂಡು ಬಾ ಎಂದು ಹೇಳಿ 500 ರು. ಕೈಗಿಟ್ಟರು. ವಿಮಾನ ಹತ್ತಿಸಿ ಹೈದರಾಬಾದ್‌ಗೆ ಕಳಿಸಿದರು. ಅಮೆರಿಕದಲ್ಲಿ ಸುತ್ತಾಡಿದ್ದ ಹಿತಾರ್ಥ ಹೈದರಾಬಾದ್‌ಗೆ ಕಾಲಿಟ್ಟಿದ್ದು ಅದೇ ಮೊದಲು. ಯಾರಿಗೂ ಗುರುತು ಹೇಳಿಕೊಳ್ಳಬೇಡ ಹಾಗೂ ವಾರಕ್ಕಿಂತ ಹೆಚ್ಚು ದಿನ ಒಂದೇ ಕೆಲಸದಲ್ಲಿರಬೇಡ ಎಂಬ ತಂದೆಯ ಷರತ್ತುಗಳು ಆತನ ಕಿವಿಯಲ್ಲಿ  ಅನುರಣಿಸುತ್ತಿದ್ದವು.

 ಮೊಬೈಲ್ ಕೂಡ ಇಲ್ಲದ್ದರಿಂದ ಬಂಧುಗಳ ಸಂಪರ್ಕವನ್ನೂ ಸಾಧಿಸುವಂತಿರಲಿಲ್ಲ. ಹೀಗಾಗಿ ಬದುಕಿ ತೋರಿಸಬೇಕು ಎಂಬ ಹಠಕ್ಕೆ ಬಿದ್ದ ಹಿತಾರ್ಥ, ವಿಮಾನ ನಿಲ್ದಾಣದಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ಕೌಂಟರ್‌ನಲ್ಲಿ ಹೈದರಾಬಾದ್- ಸಿಕಂದರಾಬಾದ್ ಕುರಿತ ಬ್ರೋಷರ್ ಓದಿ, ಸಹ ಪ್ರಯಾಣಿಕರಿಂದ ಆ ಎರಡೂ ನಗರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ. ಬಳಿಕ ಶಂಷಾಬಾದ್ ವಿಮಾನ ನಿಲ್ದಾಣದಿಂದ ಬಸ್‌ನಲ್ಲಿ ಸಿಕಂದರಾಬಾದ್‌ಗೆ ಬಂದಿಳಿದ. ಅಗ್ಗದ ಹೋಟೆಲೊಂದರಲ್ಲಿ ಕೋಣೆ ಮಾಡಿ, ತಾನು ಬಡ ಗುಜರಾತಿ ರೈತನ ಮಗನಾಗಿದ್ದು, ಉದ್ಯೋಗ ಅರಸಲು ಬಂದಿರುವುದಾಗಿ ಸುಳ್ಳು ಹೇಳಿದ. ತಕ್ಷಣವೇ ಮೆಕ್‌ಡೊನಾಲ್ಡ್ ಮಳಿಗೆಯಲ್ಲಿ ಮೊದಲ ಕೆಲಸ ಗಿಟ್ಟಿಸಿದ.

ಬಳಿಕ ಮಾರ್ಕೆಟಿಂಗ್ ಕಂಪನಿಯಲ್ಲಿ ಡೆಲಿವರಿ ಬಾಯ್, ಅಡಿಡಾಸ್ ಶೂ ಕಂಪನಿ, ಜೇಡ್ ಬ್ಲೂ ಶೋ ರೂಂನಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡಿದೆ. ಜು.10ರಂದು ಹೈದರಾಬಾದ್‌ಗೆ 500 ರು.ನೊಂದಿಗೆ ಕಾಲಿಟ್ಟ ಹಿತಾರ್ಥ, ಈಗ 5000 ರು. ಸಂಪಾದಿಸಿ, ಯಾವ ವಿವಿಯಲ್ಲೂ ಸಿಗದ ಅನುಭವ ದೊಂದಿಗೆ ಗುಜರಾತಿಗೆ ಮರಳಿದ್ದಾನೆ. ಶೀಘ್ರದಲ್ಲೇ ತಂದೆಯ ಕಂಪನಿಗೆ ಸೇರ್ಪಡೆಯಾಗಲಿದ್ದಾನೆ. ಘನಶ್ಯಾಮ ಅವರ ಹಿರಿಯ ಸೋದರ ಸಾವ್‌ಜೀ ಧೋಲಾಕಿಯಾ ಅವರ ಪುತ್ರ ದ್ರವ್ಯ ಧೋಲಾಕಿಯಾ ಕಳೆದ ವರ್ಷ ಒಂದು ತಿಂಗಳ ಕಾಲ ಕೇರಳದಲ್ಲಿ ಇದೇ ರೀತಿ ಸಣ್ಣಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ
Hate Speech Bill: ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ