
ಪಟನಾ(ಜ.22): ಮದ್ಯವಿರೋಧಿ ಜಾಗೃತಿಗಾಗಿ 38 ಜಿಲ್ಲೆಗಳಲ್ಲಿ 11,292 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಬಿಹಾರ ಹೊಸ ದಾಖಲೆ ಸೃಷ್ಟಿಸಿದೆ. ಬಿಹಾರ ಸಿಎಂ ನಿತೀಶ್ ಕುಮಾರ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿ ಹಲವು ಪಕ್ಷಗಳ ನಾಯಕರು ಹಾಗೂ 2 ಕೋಟಿಗೂ ಅಧಿಕ ಜನ ವಿಶ್ವದ ಅತಿ ಉದ್ದದ ಮಾನವ ಸರಪಳಿ ರಚಿಸಿದ್ದಾರೆ. ವಿಶೇಷವೆಂದರೆ, ಇಸ್ರೋದ ಮೂರು ಉಪಗ್ರಹಗಳು, ನಾಲ್ಕು ತರಬೇತಿ ವಿಮಾನಗಳು, ಕಾಪ್ಟರ್‌ಗಳು ಹಾಗೂ 40 ಡ್ರೋನ್‌ಗಳು ಈ ಅಭೂತಪೂರ್ವ ದಾಖಲೆಯನ್ನು ಸೆರೆಹಿಡಿದವು.
ಸುಮಾರು 3 ಸಾವಿರ ಕಿ.ಮೀ.ನ ರಾಷ್ಟ್ರೀಯ ಹೆದ್ದಾರಿ, 8,285 ಕಿ.ಮೀ. ರಾಜ್ಯ ಹೆದ್ದಾರಿಗಳು ಮತ್ತು ಇತರೆ ರಸ್ತೆಗಳಲ್ಲಿ ಕೋಟಿಗಟ್ಟಲೆ ಮಂದಿ ಪರಸ್ಪರ ಕೈ ಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿದರು. ಬಿಹಾರದ 11 ಕೋಟಿ ಜನಸಂಖ್ಯೆಯ ಪೈಕಿ 2.5 ಕೋಟಿಯಷ್ಟುಮಂದಿ ಇದರಲ್ಲಿ ಭಾಗಿಯಾಗುವ ಮೂಲಕ ಗಿನ್ನೆಸ್ ದಾಖಲೆ ಮಾಡಿದರು. 2004ರಲ್ಲಿ 10 ಸಾವಿರ ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಬಾಂಗ್ಲಾದೇಶವು ಮಾಡಿದ್ದ ದಾಖಲೆಯನ್ನು ಬಿಹಾರವು ಇದೇ ಸಂದರ್ಭದಲ್ಲಿ ಮುರಿಯಿತು.
ಪಕ್ಷಭೇದ ಮರೆತು ಸೇರಿದರು: ಸಿವಾನ್‌ನ ಗಾಂಧಿ ಮೈದಾನದಲ್ಲಿ 45 ನಿಮಿಷಗಳ ಕಾಲ ರಚನೆಗೊಂಡ ಐತಿಹಾಸಿಕ ಮಾನವ ಸರಪಳಿಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಚೌಧರಿ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಚಿವ ಆಶೋಕ್ ಚೌಧರಿ, ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ, ವಿಧಾನಸಭಾ ಕೌನ್ಸಿಲ್ ಕಾರ್ಯದರ್ಶಿ ಅವ್‌ದೇಶ್ ನಾರಾಯಣ್ ಸಿಂಗ್, ಸಂಸದ ತಾರಿಕ್ ಅನ್ವರ್, ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಅನೇಕರು ಪಕ್ಷಬೇಧ ಮರೆತು ಪಾಲ್ಗೊಂಡರು.
ಸರಪಳಿಯಲ್ಲಿ ಸರ್ಕಾರಿ ಶಾಲೆಗಳ 1.57 ಕೋಟಿ ಮಕ್ಕಳು, 4 ಲಕ್ಷ ಶಿಕ್ಷಕರು, 5 ಲಕ್ಷ ಕಾಲೇಜು ವಿದ್ಯಾರ್ಥಿಗಳು, 70 ಲಕ್ಷ ಮಂದಿ ಸ್ವಸಹಾಯ ಸಂಘಗಳ ಮಹಿಳೆಯರು, 1.70 ಲಕ್ಷ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.