ದೋಸ್ತಿ ಪಕ್ಷಗಳಿಂದ ಬಿಜೆಪಿಗೆ ಬಿಗ್ ಶಾಕ್‌

By Web DeskFirst Published Nov 1, 2018, 10:38 AM IST
Highlights

ಬಿಜೆಪಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆ ಹೊಸ್ತಿಲಿನಲ್ಲೇ ಬಿಜೆಪಿಗೆ ಈ ವಿಚಾರ ಕೊಂಚ ನಡುಕ ಹುಟ್ಟಿಸುವಂತಿದೆ. 

ಬೆಂಗಳೂರು :  ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿಗಳು ಸೇರಿದಂತೆ ಒಟ್ಟು 68 ನಗರ ಸ್ಥಳೀಯ ಸಂಸ್ಥೆಗಳ ಸ್ಥಾನಗಳು ಹಾಗೂ 36 ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಕೊಡಗು ಜಿಲ್ಲೆಯ 3 ಮೂರು ಪ.ಪಂ.ಗಳ ಪೈಕಿ ಎರಡರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಧಿಕಾರ ಹಿಡಿಯುವುದು ಬಹುತೇಕ ನಿಶ್ಚಿತವಾಗಿದೆ. ಇನ್ನು ಬೆಳ್ತಂಗಡಿ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ದೊರಕಿದೆ.

ಪ್ರಾಕೃತಿಕ ವಿಕೋಪದಿಂದ ತತ್ತರಿಸಿದ್ದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಅ.3ಕ್ಕೆ ಮುಂದೂಡಲಾಗಿತ್ತು. ಅಂದು ನಡೆದ ಚುನಾವಣೆ ಫಲಿತಾಂಶ ಈಗ ಪ್ರಕಟವಾಗಿದ್ದು, ಸೋಮವಾರಪೇಟೆ ಪಪಂನಲ್ಲಿ 22 ವರ್ಷಗಳ ಬಿಜೆಪಿ ಆಡಳಿತಕ್ಕೆ ತೆರೆ ಎಳೆಯುವಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸಫಲವಾಗಿವೆ.

ಈ ಪಪಂನ ಒಟ್ಟು 11 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 4, ಜೆಡಿಎಸ್‌ 3, ಬಿಜೆಪಿ 3 ಹಾಗೂ ಓರ್ವ ಪಕ್ಷೇತರರು ಜಯಗಳಿಸಿದ್ದಾರೆ. ಇನ್ನು ಕುಶಾಲನಗರ ಪಪಂನಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟಬಹುಮತ ಲಭಿಸದೇ ಇದ್ದರೂ ಬಹುತೇಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಆಡಳಿತಕ್ಕೇರುವ ಸಾಧ್ಯತೆಗಳು ನಿಚ್ಚಳವಾಗಿವೆ. ಒಟ್ಟು 16 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್‌ 6, ಜೆಡಿಎಸ್‌ನ ನಾಲ್ವರು ವಿಜೇತರಾಗಿದ್ದಾರೆ.

ವಿರಾಜಪೇಟೆಯಲ್ಲಿ ಅತಂತ್ರ:  ವಿರಾ​ಜ​ಪೇಟೆ ಪಪಂನಲ್ಲಿ ಕಳೆದ ಅವ​ಧಿ​ಯಲ್ಲಿ ಆಡ​ಳಿತ ನಡೆಸಿದ್ದ ಬಿಜೆಪಿ ಈ ಬಾರಿ ಎಂಟು ಸ್ಥಾನ​ಕ್ಕೆ ಸೀಮಿ​ತ​ವಾಗಿ ಅತಿ ದೊಡ್ಡ ಪಕ್ಷ​ವಾಗಿ ಹೊರ ಹೊಮ್ಮಿದೆ. ಆದರೆ, ಬಹು​ಮತಕ್ಕೆ ಬಿಜೆಪಿಗೆ ಇನ್ನೂ ಎರಡು ಸ್ಥಾನ​ಗಳ ಕೊರ​ತೆ​ ಇದೆ. ಒಟ್ಟು 18 ಸ್ಥಾನ​ಗ​ಳ ಪೈಕಿ ಬಿಜೆಪಿ 8, ಕಾಂಗ್ರೆ​ಸ್‌ 6, ಜೆಡಿ​ಎ​ಸ್‌​ನ ಒಬ್ಬರು ಹಾಗೂ ಮೂವರು ಪಕ್ಷೇ​ತ​ರರು ಗೆಲುವು ಸಾಧಿಸಿದ್ದಾರೆ. ಒಂದು ವೇಳೆ ಬಿಜೆಪಿ ಪಕ್ಷೇತರರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರೆ ಮತ್ತೆ ಅಧಿಕಾರಕ್ಕೇರುವುದು ಸಾಧ್ಯವಿದೆ.

ಬೆಳ್ತಂಗ​ಡಿಯಲ್ಲಿ ಅರಳಿದ ಕಮಲ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣ ಪಂಚಾಯ್ತಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನೇರಲು ಸಿದ್ಧವಾಗಿದೆ. ಪಪಂನ ಒಟ್ಟು 11 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 7 ವಾರ್ಡ್‌ಗಳಲ್ಲಿ ಬಿಜೆಪಿ, 4 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಇದಲ್ಲದೆ ಮಾಜಿ ಸಚಿವ ರಮಾನಾಥ ರೈ ಅವರ ಕ್ಷೇತ್ರವಾದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಗಬೆಟ್ಟು ತಾಲೂಕು ಪಂಚಾಯಿತಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಭಾಕರ ಪ್ರಭು ವಿಜಯಿಯಾಗಿದ್ದಾರೆ.

ಉಳಿದಂತೆ ಕಲಬುರಗಿ ಜಿಪಂನ ಅಡಕಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ವೀರಣ್ಣ ಪಾಣಿ, ಚಾಮರಾಜನಗರ ನಗರಸಭೆಯ ಪ್ರತಿಷ್ಠೆಯ 9ನೇ ವಾರ್ಡ್‌ನಲ್ಲಿ ನಾಗೇಂದ್ರ ಆಯ್ಕೆಯಾಗಿದ್ದಾರೆ. ಇವರಿಬ್ಬರು ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಅಲ್ಲದೆ, ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಸೋಮನಾಥಪುರ ಜಿಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಸ್‌.ವಿ. ಜಯಪಾಲ್‌, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಜಿಪಂ ಉಪ ಚುನಾವಣೆಯಲ್ಲಿ ಮೂರು ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಅಣ್ಣೇಗೌಡ, ಶಿವಮೊಗ್ಗ ಜಿಲ್ಲೆಯ ಅವಿನಹಳ್ಳಿ ಜಿಪಂ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಅಣ್ಣನ ಮಗ, ಕಾಂಗ್ರೆಸ್‌ನ ಕಾಗೋಡು ಅಣ್ಣಾಜಿ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಪಂಗೆ ನಡೆದ ರಾಮನಾಥಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಜಿ.ಸಿ.ಮಂಜೇಗೌಡ ಆಯ್ಕೆಯಾಗಿದ್ದಾರೆ.

ಗೊಂದಲದಲ್ಲಿ ಜಾಲಹಳ್ಳಿ ಫಲಿತಾಂಶ :  ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಜಿಪಂ ಉಪ ಚುನಾವಣೆ ಮತ ಎಣಿಕೆ ಬುಧವಾರ ನಡೆಯಿತಾದರೂ ಮತಯಂತ್ರದ ದೋಷದಿಂದ ಫಲಿತಾಂಶ ಪ್ರಕಟವಾಗಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಚುನಾವಣಾ ಆಯೋಗದ ಮೊರೆ ಹೋಗಲಾಗಿದೆ. ಆಯೋಗದ ನಿರ್ದೇಶನ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾಲಹಳ್ಳಿಯ ಒಟ್ಟು 31 ಮತಗಟ್ಟೆಗಳಲ್ಲಿ 30 ಮತ ಗಟ್ಟೆಗಳ ಮತ ಎಣಿಕೆ ಆಗಿದ್ದು, ಕೇವಲ ಮತಗಟ್ಟೆಸಂಖ್ಯೆ 122ರಲ್ಲಿ ಮತಯಂತ್ರ ದೋಷದಿಂದ ಮತ ಚಲಾವಣೆಯ ವಿವರಗಳು ಸಿಗುತ್ತಿಲ್ಲ.

click me!