ಬೆಂಗಳೂರಿನ ಆರ್‌ಆರ್ ನಗರದಲ್ಲಿ ಬಿಗ್‌ಫೈಟ್?

By Suvarna Web DeskFirst Published Nov 6, 2017, 1:35 PM IST
Highlights

ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಒಕ್ಕಲಿಗ ಸಮುದಾಯದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದರೆ ಮುನಿರತ್ನ ಅವರನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಹಾಕಿರುವ ಉಭಯ ಪಕ್ಷಗಳ ಮುಖಂಡರು, ಮತ ವಿಭಜನೆ ಆಗದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ. ಈ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೆರೆಮರೆಯಲ್ಲಿ ಮಾತುಕತೆ ನಡೆಯುವ ನಿರೀಕ್ಷೆ ಸ್ಪಷ್ಟವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಟ್ಟಿಗೆ ತೀವ್ರ ಕುತೂಹಲ ಕೆರಳಿಸಬಲ್ಲ ಪ್ರತಿಷ್ಠೆಯ ಕಣವಾಗಲಿರುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಮುನಿರತ್ನ ಅವರನ್ನು ಸೋಲಿಸುವ ಸಂಬಂಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಜೆಡಿಎಸ್ ಕಸರತ್ತು ಆರಂಭಿಸಿವೆ. ಈ ಕಸರತ್ತು ಅಂತಿಮವಾಗಿ ಉಭಯ ಪಕ್ಷಗಳು ತೆರೆಮರೆಯಲ್ಲಿ ಒಪ್ಪಂದ ಮಾಡಿಕೊಂಡು ಒಂದು ಪಕ್ಷ ಪ್ರಬಲ ಅಭ್ಯರ್ಥಿಯನ್ನು ಹಾಗೂ ಮತ್ತೊಂದು ಪಕ್ಷ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.

ಬಿಜೆಪಿಯಿಂದ ಕಣಕ್ಕಿಳಿಯಲು ಅಭ್ಯರ್ಥಿಗಳ ಕೊರತೆಯಿಲ್ಲ. ಆದರೆ, ಜೆಡಿಎಸ್‌ನಿಂದ ನಗರ ಘಟಕದ ಅಧ್ಯಕ್ಷ ಪ್ರಕಾಶ್ ಆಕಾಂಕ್ಷಿಯಾಗಿದ್ದರೂ ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪ್ರಜ್ವಲ್ ಕಣಕ್ಕಿಳಿದಲ್ಲಿ ಕ್ಷೇತ್ರದ ಚುನಾವಣೆಯ ರಂಗು ಬದಲಾಗಲಿದೆ. ಬಿಜೆಪಿಯಿಂದಲೂ ಅಭ್ಯರ್ಥಿ ಆಯ್ಕೆಯಲ್ಲಿ ಬದಲಾವಣೆ ನಡೆಸುವ ಸಾಧ್ಯತೆಯಿದ್ದು, ಜೆಡಿಎಸ್‌ನ ನಡೆಯನ್ನು ಬಿಜೆಪಿಯ ಕೆಲ ನಾಯಕರು ಕಾದು ನೋಡುತ್ತಿದ್ದಾರೆ.

ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಒಕ್ಕಲಿಗ ಸಮುದಾಯದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದರೆ ಮುನಿರತ್ನ ಅವರನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಹಾಕಿರುವ ಉಭಯ ಪಕ್ಷಗಳ ಮುಖಂಡರು, ಮತ ವಿಭಜನೆ ಆಗದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ. ಈ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೆರೆಮರೆಯಲ್ಲಿ ಮಾತುಕತೆ ನಡೆಯುವ ನಿರೀಕ್ಷೆ ಸ್ಪಷ್ಟವಾಗಿದೆ. ಬಿಜೆಪಿಯಿಂದ ರಾಜ್ಯ ಕಾರ್ಯದರ್ಶಿ ಪಿ. ಮುನಿರಾಜುಗೌಡ ಅಥವಾ ತುಳಸಿ ಮುನಿರಾಜು ಗೌಡ, ಚಿತ್ರನಟ ಗಣೇಶ್ ಪತ್ನಿಯೂ ಆಗಿರುವ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್, ಬಿಬಿಎಂಪಿ ಸದಸ್ಯ ರಾಮಚಂದ್ರ, ಪಕ್ಷದ ಹಿರಿಯ ನಾಯಕ ರಾಮಚಂದ್ರಗೌಡರ ಪುತ್ರರೂ ಆಗಿರುವ ಯುವಮೋರ್ಚಾ ಮುಖಂಡ ಸಪ್ತಗಿರಿಗೌಡ ಅವರ ಹೆಸರುಗಳು ಕೇಳಿಬರುತ್ತಿವೆ.

ಈ ಪೈಕಿ ಮುನಿರಾಜುಗೌಡ ಅವರ ಹೆಸರು ಮುಂಚೂಣಿಯಲ್ಲಿದ್ದು, ಈಗಾಗಲೇ ಒಂದು ಸುತ್ತಿನ ಕೆಲಸವನ್ನೂ ಆರಂಭಿಸಿದ್ದಾರೆ. ಆದರೆ, ಮುನಿರಾಜು ಅವರು ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮಾನಸ ಪುತ್ರ ಎಂದೇ ಬಿಜೆಪಿಯಲ್ಲಿ ಕರೆಯಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅನಿರೀಕ್ಷಿತ ಬದಲಾವಣೆ ಇಲ್ಲದಿದ್ದಲ್ಲಿ ಮುನಿರಾಜು ಅವರ ಹೆಸರೇ ಅಂತಿಮಗೊಳ್ಳುವ ಸಂಭವ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಇನ್ನು ಶಿಲ್ಪಾ ಗಣೇಶ್ ಅವರು ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯುವ ದೂರದೃಷ್ಟಿಯಿಂದ ಅದೇ ಕ್ಷೇತ್ರದಲ್ಲಿ ಮನೆ ಮಾಡಿದ್ದಾರೆ. ಕೆಳಹಂತದ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿಲ್ಲ ಎಂಬ ಆರೋಪ ಅಂಟಿಕೊಂಡಿದೆ. ಜತೆಗೆ ಇವರು ಪ್ರಬಲ ಸಮುದಾಯಕ್ಕೆ ಸೇರಿದವರಲ್ಲ ಎಂಬುದು ಮತ್ತೊಂದು ನಕಾರಾತ್ಮಕ ಅಂಶ.

ಎಸ್‌ಎಂಕೆ ಪುತ್ರಿ ಡಾರ್ಕ್ ಹಾರ್ಸ್?

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಅವರು ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಕೃಷ್ಣ ಅವರು ಪಕ್ಷ ಸೇರಿದಂದಿನಿಂದಲೂ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಪರಿಸ್ಥಿತಿ ತಮಗೆ ಪೂರ್ಣ ಪ್ರಮಾಣದಲ್ಲಿ ಅನುಕೂಲವಿದೆ ಎಂಬುದಾದರೆ ಮಾತ್ರ ಶಾಂಭವಿ ಅವರನ್ನು ಕಣಕ್ಕಿಳಿಸಬಹುದು. ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಶಾಂಭವಿ ಕಣಕ್ಕಿಳಿದಲ್ಲಿ ಚುನಾವಣಾ ಹೋರಾಟ ಸ್ವರೂಪ ತೀವ್ರವಾಗಲಿದೆ ಎನ್ನುವುದು ಮಾತ್ರ ಸ್ಪಷ್ಟ.

ನಟಿ ಅಮೂಲ್ಯ ಹೆಸರು ಚಾಲ್ತಿಗೆ

ಚಿತ್ರನಟಿ ಅಮೂಲ್ಯ ಈ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬುದು ಹೊಸ ವದಂತಿ. ಅಮೂಲ್ಯ ಈಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯೂ ಆಗಿರುವ ಬಿಜೆಪಿಯ ಬಿಬಿಎಂಪಿ ಸದಸ್ಯ ರಾಮಚಂದ್ರ ಅವರ ಸೊಸೆ. ಇಂಥದೊಂದು ಸುದ್ದಿ ಹಬ್ಬಿದೆಯಾದರೂ ಅದನ್ನು ಖುದ್ದು ಅಮೂಲ್ಯ ನಿರಾಕರಿಸಿದ್ದಾರೆ. ಈ ಬಗ್ಗೆ ಬಿಜೆಪಿಯಲ್ಲೂ ಯಾವುದೇ ಮಾಹಿತಿಯಿಲ್ಲ. ಮೇಲಾಗಿ ಅಮೂಲ್ಯ ಅವರನ್ನು ರಾಮಚಂದ್ರ ಅವರ ಸೊಸೆಯನ್ನಾಗಿ ತರುವಲ್ಲಿ ಶಿಲ್ಪಾ ಗಣೇಶ್ ಅವರ ಪಾತ್ರ ಪ್ರಮುಖವಾದದ್ದು. ಈಗ ಅವರನ್ನೇ ಹಿಂದಿಕ್ಕಿ ಆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎನ್ನಲಾಗುತ್ತಿದೆ.

(ಕನ್ನಡಪ್ರಭ)

click me!