ಬಿಗ್ 3 ಇಂಪ್ಯಾಕ್ಟ್! 30 ವರ್ಷ ಕರೆಂಟ್ ಕಾಣದ ಮನೆಗೆ 6 ಗಂಟೆಯಲ್ಲಿ ಬೆಳಕು ಬಂತು!

By Web DeskFirst Published Dec 14, 2018, 10:42 AM IST
Highlights

30 ವರ್ಷ ಕರೆಂಟ್ ಕಾಣದ ಮನೆಗೆ 6 ಗಂಟೆಯಲ್ಲಿ ಬೆಳಕು ಬಂತು! ಸುವರ್ಣ ನ್ಯೂಸ್ ಬಿಗ್-3 ಕಾರ್ಯಕ್ರಮದ ಎಫೆಕ್ಟ್, ಬಡಕುಟುಂಬಕ್ಕೆ ಸಿಕ್ಕಿತು ಟಿವಿ, ಫ್ರಿಡ್ಜ್, ಮಿಕ್ಸಿ ಕೊಡುಗೆ 

ಮಂಗಳೂರು (ಡಿ. 14): ಸುಮಾರು 30 ವರ್ಷಗಳಿಂದ ವಿದ್ಯುತ್ ಕಾಣದ ಮಂಗಳೂರು ತಾಲೂಕಿನ ಎಡಪದವಿನ ಬಡ ಕುಟುಂಬವೊಂದಕ್ಕೆ ಕೇವಲ ಆರು ಗಂಟೆಯಲ್ಲಿ ವಿದ್ಯುತ್ ಸಂಪರ್ಕ ಲಭಿಸಿದೆ. ಇದಕ್ಕೆ ಕಾರಣವಾದ್ದು ಕನ್ನಡಪ್ರಭದ ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮ. ಈ ಕಾರ್ಯಕ್ರಮವೀಗ ಮಾಧ್ಯಮ ಲೋಕದಲ್ಲಿ ಹೊಸ ದಾಖಲೆಬರೆದಿದೆ.

ಎಡಪದವಿನ ಪದ್ರೆಂಗಿ ಗ್ರಾಮದ ಶೇಖರ ನಾಯ್ಕ್ ಮತ್ತು ಪ್ರೇಮಾ ನಾಯ್ಕ್ ದಂಪತಿಯ ಮನೆಗೆ ಕಳೆದ 30 ವರ್ಷಗಳಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಈ ಬಗ್ಗೆ ಎಡಪದವು ಪಂಚಾಯ್ತಿ ಹಾಗೂ ಮೆಸ್ಕಾಂಗೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಲ್ಲದೆ ಇವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನೆರೆಮನೆ ನಿವಾಸಿ ಎಡಪದವು ಗ್ರಾ.ಪಂ ಸದಸ್ಯರೊಬ್ಬರು ಅಡ್ಡಿಯಾಗಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಸುವರ್ಣ ನ್ಯೂಸ್, ತನ್ನ ಬಿಗ್ 3 ಕಾರ್ಯಕ್ರಮದಲ್ಲಿ ಬುಧವಾರ ಬೆಳಗ್ಗೆ ಸಮಗ್ರ ವರದಿ ಪ್ರಸಾರ ಮಾಡಿತ್ತು. ಅಲ್ಲದೆ ಬೆಳಗ್ಗೆ 10 ಗಂಟೆಗೆ ಮಂಗಳೂರು ಮೆಸ್ಕಾಂ ವಿಭಾಗ ಕಾರ್ಯಕಾರಿ ಇಂಜಿನಿಯರ್ ಕಚೇರಿಗೆ ತೆರಳಿದ ಸುವರ್ಣ ನ್ಯೂಸ್ ತಂಡ, ಶೇಖರ ನಾಯ್ಕರ ಮನೆಗೆ ವಿದ್ಯುತ್ ಒದಗಿಸುವಂತೆ ಪಟ್ಟು ಹಿಡಿದಿತ್ತು.

ಚಾನೆಲ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಮೆಸ್ಕಾಂ ಅಧಿಕಾರಿಗಳು ಶೇಖರ ನಾಯ್ಕರ ಕುಟುಂಬವನ್ನು ಸಂಪರ್ಕಿಸಿದರು. ಮನೆ ಸಮೀಪ ಕೈಕಂಬದ ಮೆಸ್ಕಾಂ ಕಚೇರಿಗೆ ಬರುವಂತೆ ತಿಳಿಸಿದ್ದರು.

ಅದರಂತೆ ಶೇಖರ ನಾಯ್ಕರ ಹಿರಿಯ ಪುತ್ರಿ ಸುವರ್ಣ ನ್ಯೂಸ್ ತಂಡದ ಜೊತೆಗೆ ಕೈಕಂಬದ ಮೆಸ್ಕಾಂ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರು. ಮಧ್ಯಾಹ್ನ ವೇಳೆಗೆ ವಿದ್ಯುತ್ ಸಂಪರ್ಕ ಮಂಜೂರಾತಿಗೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಅಧಿಕಾರಿಗಳು ಮುಕ್ತಾಯಗೊಳಿಸಿದರು.

ಇದರ ಬೆನ್ನಲ್ಲೇ ಸಂಜೆ 4 ಗಂಟೆಗೆ ಎರಡು ವಿದ್ಯುತ್ ಕಂಬಗಳ ಸಮೇತ ಮೆಸ್ಕಾಂ ತಂಡ ಪದ್ರೆಂಗಿ ಗ್ರಾಮಕ್ಕೆ ಹಾಜರ್. ಕಂಬ ನೆಟ್ಟು ಸಂಜೆ 6 ಗಂಟೆಗೆ ಶೇಖರ ನಾಯ್ಕರ ಮನೆಯಲ್ಲಿ ಎರಡು ಬಲ್ಬ್ ಉರಿಸಲು ವ್ಯವಸ್ಥೆ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರು. ಈ ಮೂಲಕ 30 ವರ್ಷಗಳಿಂದ ಆಗದ ಕೆಲಸವನ್ನು ಬಿಗ್ 3 ವರದಿ ಪ್ರಸಾರವಾದ 6 ಗಂಟೆಗಳಲ್ಲಿ ಆಗಿದ್ದು, ಶೇಖರ ನಾಯ್ಕರ ಕುಟುಂಬದ ಸಂತಸಕ್ಕೆ ಪಾರವೇ ಇರಲಿಲ್ಲ.

ಮೋದಿ ಕನಸು ನುಚ್ಚುನೂರು ಮಾಡಿದ್ದ ಬಿಜೆಪಿ ಮುಖಂಡ!

ಶೇಖರ್ ನಾಯ್ಕ ಮತ್ತು ಪ್ರೇಮಾ ನಾಯ್ಕ ದಂಪತಿ ಕಳೆದ 30 ವರ್ಷಗಳ ಹಿಂದೆ ಸರ್ಕಾರದಿಂದ ಮಂಜೂರಾದ 28 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದೆ.ಇಬ್ಬರು ಹೆಣ್ಮಕ್ಕಳ ಜೊತೆಗೆ ಬದುಕು ಸಾಗಿಸುತ್ತಿರುವ
ಇವರಿಗೆ ರಾತ್ರಿ ಚಿಮಿಣಿ ದೀಪ ಹಾಗೂ ಚಿಕ್ಕದೊಂದುಸೋಲಾರ್ ದೀಪವೇ ಬೆಳಕು ನೀಡುತ್ತಿತ್ತು.

ಮನೆಯಕೂಗಳತೆ ದೂರದಲ್ಲೇ ವಿದ್ಯುತ್ ಕಂಬವಿದ್ದರೂ ಈಮನೆಗೆ ಮಾತ್ರ ಬೆಳಕು ನೀಡುವುದಕ್ಕೆ ಮೆಸ್ಕಾಂನಿಂದ ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ಮನೆ ಸಮೀಪದನಿವಾಸಿ, ಬಿಜೆಪಿ ಮುಖಂಡ ಮತ್ತು ಎಡಪದವು ಗ್ರಾ.ಪಂಸದಸ್ಯ ರುಕ್ಮಯ ನಾಯ್ಕ ಎಂಬವರ ಸ್ವಪ್ರತಿಷ್ಠೆ.

ರುಕ್ಮಯ ನಾಯ್ಕರು ತನ್ನ ಜಾಗದಲ್ಲಿ ಮೆಸ್ಕಾಂ ವಿದ್ಯುತ್ ಕಂಬಅಳವಡಿಸಲು ಅವಕಾಶ ನೀಡಿರಲಿಲ್ಲ. ಅಲ್ಲದೆ ಆ ದಾರಿಯಾಗಿ ವಿದ್ಯುತ್ ಕೇಬಲ್ ಬರೋದಕ್ಕೂ ಅವಕಾಶ ಕೊಡದೆ ಅಮಾನವೀಯತೆ ತೋರಿದ್ದರು. ಗ್ರಾಮ ಪಂಚಾಯ್ತಿಯಿಂದ ಲೋಕಸಭೆಯವರೆಗೂ ಒಂದೇ ಪಕ್ಷದ ಜನಪ್ರತಿನಿಧಿಗಳಿದ್ದರೂ ತಮ್ಮದೇ ಪಕ್ಷದ ಮುಖಂಡನೋರ್ವನ ಮನವೊಲಿಸಿ ಶೇಖರ ನಾಯ್ಕ್‌ರ ಮನೆಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಫಲರಾಗಿದ್ದರು. ಆದರೆ ಕೊನೆಗೂ ಸುವರ್ಣ ನ್ಯೂಸ್ ಬಿಗ್ 3 ಅಧಿಕಾರಿಗಳ ಕಣ್ಣು ತೆರೆಸಿ ಈ ಬಡ ಕುಟುಂಬಕ್ಕೆ ಬೆಳಕು ನೀಡಿದೆ. 

"

ನಾಯ್ಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಟೇಲ್ ಉದ್ಯಮಿ 2 ಲಕ್ಷ ರು. ನೆರವು

ಮನೆಗೆ ವಿದ್ಯುತ್ ಸಂಪರ್ಕ ಲಭಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಗುರುವಾರವಿಡೀ ಶೇಖರ ನಾಯ್ಕರ ಕುಟುಂಬ ಕರುನಾಡು ಮತ್ತು ಸುವರ್ಣ ನ್ಯೂಸ್‌ಗೆ ಧನ್ಯವಾದ ಸಲ್ಲಸಿತು. ಈ ವೇಳೆ ಕುಟುಂಬದ ಹಿರಿಯ ಪುತ್ರಿ ಜ್ಯೋತಿ ಮತ್ತು ಕಿರಿಯ ಪುತ್ರಿ ಸ್ವಾತಿ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿರುವ ಬಗ್ಗೆಯೂ ಬಿಗ್ 3 ಬೆಳಕು ಚೆಲ್ಲಿತ್ತು.

ಜ್ಯೋತಿ ಎಂಸಿಜೆ ಮತ್ತು ಸ್ವಾತಿ ಪದವಿ ಮಾಡುವ ಗುರಿ ಹೊಂದಿದ್ದರು. ಇವರ ತಾಯಿಯ ಆರೋಗ್ಯ ಸುಧಾರಿಸಲು ಒಂದಷ್ಟು ಖರ್ಚಿನ ಬಗ್ಗೆಯೂ ಬಿಗ್ 3 ವರದಿ ಮಾಡಿತ್ತು. ಅಲ್ಲದೆ ವಿದ್ಯಾಭ್ಯಾಸ ಮತ್ತುತಾಯಿಯ ಆರೋಗ್ಯ ಸುಧಾರಣೆಗೆ ೨ ಲಕ್ಷ ರು.ವರೆಗೆ ಖರ್ಚು ಬರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಸುವರ್ಣ ನ್ಯೂಸ್‌ನಲ್ಲಿ ಈ ವರದಿ ನೋಡಿದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಅವರು 2 ಲಕ್ಷ ರು. ನೆರವು ನೀಡಿದ್ದಾರೆ. ಅಲ್ಲದೆ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದಾರೆ.

click me!