ನಾಪತ್ತೆಯಾಗಿದ್ದ ಭೀಮಾನಾಯಕ್ ಒಂದು ವಾರ ಆಶ್ರಯ ಪಡೆದದ್ದು ಸಿಎಂ ಆಪ್ತ ಶಾಸಕನ ಮನೆಯಲ್ಲೇ?

By Suvarna Web DeskFirst Published Dec 16, 2016, 11:13 AM IST
Highlights

ಸದ್ಯ ಭೀಮಾನಾಯಕ್ ಸಿಐಡಿ ಪೊಲೀಸರ ವಶದಲ್ಲಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ತಂಡಗಳು ಭೀಮಾನಾಯಕ್ ಅವರ ಆಸ್ತಿಪಾಸ್ತಿ ಮೇಲೆ ಎಡೆಬಿಡದೇ ದಾಳಿ ನಡೆಸುತ್ತಿವೆ.

ಬೆಂಗಳೂರು(ಡಿ. 16): ಗಣಿಧಣಿ ಜನಾರ್ಧನ್ ರೆಡ್ಡಿ ಅಕ್ರಮ ಕಪ್ಪು ಹಣವನ್ನು ಬಿಳಿಯಾಗಿಸಿದ ಆರೋಪ ಹೊತ್ತಿರುವ ಕೆಎಎಸ್ ಅಧಿಕಾರಿ ಭೀಮಾನಾಯಕ್ ಬಂಧನಕ್ಕೂ ಮುನ್ನ ಒಂದು ವಾರ ತಲೆ ಮರೆಸಿಕೊಂಡಿದ್ದು ಎಲ್ಲಿ ಎಂಬ ನಿಗೂಢ ಪ್ರಶ್ನೆಗೆ ಕೆಲ ಮೂಲಗಳಿಂದ ಉತ್ತರ ಸಿಕ್ಕಿದೆ. ಕಲಬುರ್ಗಿಯ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾದವ್ ಅವರ ಮನೆಯಲ್ಲಿ ಭೀಮಾ ನಾಯಕ್ ಆಶ್ರಯ ಪಡೆದುಕೊಂಡಿದ್ದರು ಎಂಬ ಮಾತು ಕೇಳಿಬರುತ್ತಿದೆ. ಶಾಸಕ ಉಮೇಶ್ ಜಾದವ್ ಅವರು ಸಿಎಂ ಸಿದ್ದರಾಮಯ್ಯನವರ ಆಪ್ತರೂ ಹಾಗೂ ಅವರ ರಾಜಕೀಯ ಕಾರ್ಯದರ್ಶಿಯೂ ಎಂಬುದೂ ಇಲ್ಲಿ ಗಮನಾರ್ಹ.

ಶಾಸಕ ಉಮೇಶ್ ಜಾಧವ್ ಮತ್ತು ಬಂಧಿತ ಅಧಿಕಾರಿ ಭೀಮಾನಾಯಕ್ ಇಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದಾರೆ. ಭೀಮಾನಾಯಕ್ ಪತ್ನಿ ಮತ್ತು ಉಮೇಶ್ ಜಾಧವ್ ಪತ್ನಿ ಇಬ್ಬರೂ ಸೋದರರಿಯರಾಗಿದ್ದಾರೆ. ಬಂಧನಕ್ಕೂ ಮುನ್ನ ಭೀಮಾನಾಯಕ್ ಅಡಗಿಕೊಂಡಿದ್ದು ತಮ್ಮ ಹೆಂಡತಿಯ ಅಣ್ಣನ ಮನೆಯಲ್ಲಿ. ಆ ಮನೆಯು ಉಮೇಶ್ ಜಾಧವ್ ಅವರಿಗೆ ತೀರಾ ಹತ್ತಿರದ ನಂಟು ಹೊಂದಿದೆ. ಬಂಧನದ ಸಂದರ್ಭದಲ್ಲಿ ಉಮೇಶ್ ಜಾಧವ ಪತ್ನಿ ಸಹ ಅದೇ ಮನೆಯಲ್ಲಿ ಇದ್ದರೆನ್ನಲಾಗಿದೆ. ಅಷ್ಟೇ ಅಲ್ಲ, ಭೀಮಾನಾಯಕ್ ಅವರು ಈ ಆಗಮಿಸಿದಾಗ ಅವರಿಗೆ ಸಾಥ್ ನೀಡಿದವರು ಇದೇ ಶಾಸಕ ಉಮೇಶ್ ಜಾಧವ್ ಅವರೇ. ಈ ಸಂಬಂಧ ಉಮೇಶ ಜಾಧವ ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಕಲಬುರಗಿಯ ಆರ್'ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಅವರು ರಾಜ್ಯಪಾಲರಿಗೆ ಮತು ಸಿಐಡಿಗೆ ದೂರು ಸಲ್ಲಿಸಿದ್ದಾರೆ. 

ಆರೋಪ ತಳ್ಳಿಹಾಕಿದ ಶಾಸಕ:
ತಾವು ಭೀಮಾನಾಯಕ್ ಅವರಿಗೆ ನೆರವು ಒದಗಿಸಿದ್ದೇನೆ ಎಂಬ ಆರೋಪವನ್ನು ಚಿಂಚೋಳಿ ಶಾಸಕ ಉಮೇಶ್ ಜಾಧವ್ ತಳ್ಳಿಹಾಕಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಜಾಧವ್, ತನಗೆ ಅವರ ಸುಳಿವು ಸಿಕ್ಕಿದ್ದರೆ ಪೊಲೀಸರಿಗೆ ಹಿಡಿದುಕೊಡುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ತಾವಿಬ್ಬರೂ ಹತ್ತಿರದ ಬಂಧುಗಳು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜಾಧವ್, ತಮ್ಮ ಪತ್ನಿಯ ತಂಗಿ ಮೃತ ಪಟ್ಟು 5 ವರ್ಷಗಳಾದವು. ತಮಗೆ ಭೀಮಾನಾಯಕ್ ಅವರೊಂದಿಗೆ ಈಗ ನಿಕಟ ಸಂಪರ್ಕವೇನಿಲ್ಲ ಎಂದು ತಿಳಿಸಿದ್ದಾರೆ.

ಕೆಎಎಸ್ ಅಧಿಕಾರಿ ಭೀಮಾನಾಯಕ್ ಅವರು ಜನಾರ್ದನ ರೆಡ್ಡಿಯವರ ಕಪ್ಪು ಹಣವನ್ನು ಬಿಳಿ ಮಾಡಿದ್ದಾರೆ. ಈ ವಿಷಯ ತಿಳಿದ ತನಗೆ ಅವರಿಂದ ಜೀವ ಬೆದರಿಕೆ ಇದೆ ಎಂದು ಭೀಮಾನಾಯಕ್ ಅವರ ಕಾರಿನ ಡ್ರೈವರ್ ರಮೇಶ್ ಗೌಡ ಎಂಬುವವರು ಡೆತ್'ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡಿ.6ರಂದು ಆ ಪ್ರಕರಣ ಬೆಳಕಿಗೆ ಬಂದ ಬಳಿಕ ಭೀಮಾನಾಯಕ್ ಅವರು ನಾಪತ್ತೆಯಾಗಿದ್ದರು. ಡಿ.11ರಂದು ಕಲಬುರ್ಗಿಯಲ್ಲಿ ಅವರ ಬಂಧನವಾಗಿತ್ತು. ಅಲ್ಲಿಯವರೆಗೂ ಅವರು ಉಮೇಶ್ ಜಾಧವ್ ಮನೆಯಲ್ಲಿ ಆಶ್ರಯ ಪಡೆದಿರಬಹುದೆಂದು ಶಂಕಿಸಲಾಗಿದೆ. ಸದ್ಯ ಭೀಮಾನಾಯಕ್ ಸಿಐಡಿ ಪೊಲೀಸರ ವಶದಲ್ಲಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಭೀಮಾನಾಯಕ್ ಅವರ ಆಸ್ತಿಪಾಸ್ತಿ ಮೇಲೆ ಎಡೆಬಿಡದೇ ದಾಳಿ ನಡೆಸುತ್ತಿದ್ದಾರೆ.

click me!