ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಿದರೆ ಶುಲ್ಕ

First Published May 18, 2018, 11:10 AM IST
Highlights

ರಾಜಧಾನಿ ಬೆಂಗಳೂರಿನ ವಸತಿ ಹಾಗೂ ವಾಣಿಜ್ಯ ಪ್ರದೇಶಗಳ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ಮಾಲೀಕರಿಂದಲೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತಿಸಿದೆ. 

ಬೆಂಗಳೂರು (ಮೇ 18) :  ರಾಜಧಾನಿ ಬೆಂಗಳೂರಿನ ವಸತಿ ಹಾಗೂ ವಾಣಿಜ್ಯ ಪ್ರದೇಶಗಳ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ಮಾಲೀಕರಿಂದಲೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತಿಸಿದೆ.

ಸದ್ಯ ದೆಹಲಿಯ ವಸತಿ ಪ್ರದೇಶ, ವಾಣಿಜ್ಯ ಪ್ರದೇಶ ಸೇರಿ ನಗರದಾದ್ಯಂತ ಸಾರ್ವಜನಿಕ ರಸ್ತೆ/ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ನಿಯಂತ್ರಿಸಲು ದೆಹಲಿ ಸರ್ಕಾರ ‘ದೆಹಲಿ ಮೈಂಟೆನೆನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಆಫ್ ಪಾರ್ಕಿಂಗ್ ರೂಲ್ಸ್ 2017 ’ ಎಂಬ ಹೊಸ ಪಾರ್ಕಿಂಗ್  ನೀತಿ ಜಾರಿಗೆ ತಂದಿದೆ. ಇದರಿಂದಾಗಿ ವಸತಿ ಪ್ರದೇಶಗಳ ಮನೆ ಮುಂದಿನ ರಸ್ತೆ, ಕಚೇರಿಗಳ ಮುಂಭಾಗದ ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ ಕಡಿವಾಣ ಬಿದ್ದಿದೆ.

ಆ ಯಾ ಪ್ರದೇಶದ ನಿವಾಸಿಗಳು ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಿ ಅನುಮತಿ ಪಡೆದ ರಸ್ತೆಯಲ್ಲಿ ಮಾತ್ರ ವಾಹನ ಪಾರ್ಕಿಂಗ್ ಮಾಡುವುದು ಮತ್ತು ಪಾರ್ಕಿಂಗ್‌ಗೆ ನಿಗದಿತ ಶುಲ್ಕ ಪಾವತಿ ಮಾಡಬೇಕಾಗಿದೆ. ಇದೀಗ ಬೆಂಗಳೂರಿನಲ್ಲೂ ಸಾರ್ವಜನಿಕ ರಸ್ತೆ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡುವುದನ್ನು ತಡೆಯಲು ದೆಹಲಿ ಮಾದರಿಯಲ್ಲಿ ಹೊಸ ಪಾರ್ಕಿಂಗ್ ನಿಯಮ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾ ಗಿದ್ದು, ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಮೇ 18 ರಂದು ಬಿಬಿಎಂಪಿ ಆಯುಕ್ತರು, ಮುಖ್ಯ ಅಭಿಯಂತರರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರ (ಸಂಚಾರ) ಸಭೆ ಕರೆಯಲಾಗಿದೆ.

ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಪ್ರಮುಖ ನಗರ. ಇಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ನಿಂದ ಆಗುತ್ತಿರುವ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಹೊಸ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆ. ಹಾಗಾಗಿ ಇತ್ತೀಚೆಗೆ ದೆಹಲಿ ಸರ್ಕಾರ ಹೊರಡಿಸಿರುವ ಹೊಸ ಪಾರ್ಕಿಂಗ್ ನೀತಿ ಅಧಿಸೂಚನೆಯಲ್ಲಿರುವ ಅಂಶಗಳನ್ನು ಎಷ್ಟರ ಮಟ್ಟಿಗೆ ಬೆಂಗಳೂರಿನಲ್ಲೂ ಜಾರಿಗೆ ತರಬಹುದು, ಏನಾದರೂ ಮಾರ್ಪಾಡುಗಳನ್ನು ಮಾಡಿ ಜಾರಿಗೊಳಿಸಬಹುದಾ ಎಂಬುದನ್ನು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ದೆಹಲಿ ಮಾದರಿ ಪಾರ್ಕಿಂಗ್ ನಿಯಮ ಜಾರಿಯಾದರೆ ನಗರದ ವಸತಿ ಪ್ರದೇಶ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಸೂಕ್ತ ಪಾರ್ಕಿಂಗ್ ಸ್ಥಳಾವಕಾಶ ಹೊಂದಿಲ್ಲದೆ, ಸಾರ್ವಜನಿಕ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿರುವ ವಾಹನಗಳ ಮಾಲೀಕರಿಗೆ ಪಾರ್ಕಿಂಗ್ ಶುಲ್ಕ ಪಾವತಿಸಬೇಕಾದ ಕಾಲ ದೂರವಿಲ್ಲ ಎಂದೇ ಹೇಳಬಹುದಾಗಿದೆ.

click me!