ನಿರ್ಭಯಾ ನಿಧಿಯಲ್ಲಿ ಬೆಂಗಳೂರು 'ಸುರಕ್ಷಿತ ನಗರ'

By Web DeskFirst Published Apr 27, 2019, 12:32 PM IST
Highlights

ನಿರ್ಭಯಾ ನಿಧಿಯ ಅಡಿ ಬೆಂಗಳೂರಿನಲ್ಲಿ ಸುರಕ್ಷಿತ ನಗರ ಯೋಜನೆ ಜಾರಿ|  ನಿರ್ಭಯಾ ನಿಧಿಗೆ ಕೇಂದ್ರ ಸರ್ಕಾರದಿಂದ 4000 ಕೋಟಿ ರು. ಹಣ ಬಿಡುಗಡೆ| ಬೆಂಗಳೂರು ಸೇರಿದಂತೆ ದೇಶದ 8 ಬೃಹತ್‌ ನಗರಗಳಲ್ಲಿ ‘ಸುರಕ್ಷಿತ ನಗರ’ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 2919 ಕೋಟಿ ರು ನಿಗದಿ 

ನವದೆಹಲಿ[ಏ.27]: ಮಹಿಳೆಯರಿಗೆ ವಿವಿಧ ಸುರಕ್ಷಿತ ಯೋಜನೆ ಜಾರಿಗೆ ಇರುವ ನಿರ್ಭಯಾ ನಿಧಿಗೆ ಕೇಂದ್ರ ಸರ್ಕಾರ 4000 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಈ ಪೈಕಿ ಬೆಂಗಳೂರು ಸೇರಿದಂತೆ ದೇಶದ 8 ಬೃಹತ್‌ ನಗರಗಳಲ್ಲಿ ‘ಸುರಕ್ಷಿತ ನಗರ’ ಯೋಜನೆಗಾಗಿ ಕೇಂದ್ರ ಸರ್ಕರ 2919 ಕೋಟಿ ರು.ಗಳನ್ನು ನಿಗದಿ ಮಾಡಿದೆ.

ಉಳಿದಂತೆ ಅತ್ಯಾಚಾರ, ಆ್ಯಸಿಡ್‌ ದಾಳಿ, ಮಹಿಳೆಯರ ವಿರುದ್ಧದ ಅಪರಾಧಗಳು, ಮಾನವ ಕಳ್ಳಸಾಗಣೆಯ ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರೀಯ ಸಂತ್ರಸ್ತ ಪರಿಹಾರ ನಿಧಿಗೆ 200 ಕೋಟಿ ರು.ಗಳನ್ನು ಒದಗಿಸಲಾಗಿದೆ. ತುರ್ತು ಪ್ರತಿಕ್ರಿಯಾ ವ್ಯವಸ್ಥೆಗೆ 321.69 ಕೋಟಿ ರು. ಹಾಗೂ ಮಹಿಳಾ ಮತ್ತು ಮಕ್ಕಳ ವಿಶೇಷ ಘಟಕ ಸ್ಥಾಪನೆಗೆ 23.53 ಕೋಟಿ ರು. ಒದಗಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಸುರಕ್ಷಾ ನಗರ ಯೋಜನೆ?

ಸುರಕ್ಷಿತ ನಗರ ಯೋಜನೆಯ ಅಡಿಯಲ್ಲಿ ನಗರದಲ್ಲಿ ಮಹಿಳೆಯ ಸುರಕ್ಷತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಹಿಳೆಯರ ಕುಂದುಕೊರತೆಗಳನ್ನು ಆಲಿಸಲು ಸಮಗ್ರ ಸ್ಮಾರ್ಟ್‌ ಕಂಟ್ರೋಲ್‌ ರೂಮ್‌ಗಳ ಸ್ಥಾಪಿಸಲಾಗುತ್ತದೆ. ಮಹಿಳೆಯರು ನಿರ್ಭೀತಿಯಿಂದ ದೂರುಗಳನ್ನು ದಾಖಲಿಸಲು ಕೇವಲ ಮಹಿಳಾ ಪೊಲೀಸರಿಂದ ನಿರ್ವಹಿಸಲ್ಪಡುವ ಗುಲಾಬಿ ಠಾಣೆ, ಮಹಿಳಾ ಪೊಲೀಸ್‌ ಪಡೆಯಿಂದ ಕಾವಲು, ಎಲ್ಲಾ ಪೊಲಿಸ್‌ ಠಾಣೆ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಮಹಿಳಾ ಸಹಾಯವಾಣಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿ.ಸಿ. ಟೀವಿ ಕ್ಯಾಮರಾ ಹಾಗೂ ಬೀದಿ ದೀಪಗಳ ಅಳವಡಿಕೆ, ಮಹಿಳೆಯರಿಗೆ ಮೀಸಲಿಟ್ಟಪಿಂಕ್‌ ಟಾಯ್ಲೆಟ್‌ಗಳ ಸ್ಥಾಪನೆ, ಎಲ್ಲಾ ರೀತಿಯ ತುರ್ತು ಸೇವೆಗಳಿಗೆ ಒಂದೇ ಸಹಾಯವಾಣಿ- 112 ಸಂಖ್ಯೆ ಜಾರಿ ಸೇರಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಹಲವಾರು ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60ರಷ್ಟುಹಣವನ್ನು ನೀಡಲಿದ್ದು, ಉಳಿದ ಶೇ.40ರಷ್ಟುಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಿದೆ. ಬೆಂಗಳೂರು, ಲಖನೌ, ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈ, ಹೈದರಾಬಾದ್‌ ಹಾಗೂ ಅಹಮದಾಬಾದ್‌ ನಗರಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

click me!