Bengaluru: ಕೆಟ್ಟ ರಸ್ತೆಯಿಂದ ಆರೋಗ್ಯ ಹಾಳು, 50 ಲಕ್ಷ ಪರಿಹಾರ ನೀಡುವಂತೆ ಬಿಬಿಎಂಪಿಗೆ ವ್ಯಕ್ತಿಯ ನೋಟಿಸ್‌!

Published : May 20, 2025, 11:55 AM IST
Bengaluru: ಕೆಟ್ಟ ರಸ್ತೆಯಿಂದ ಆರೋಗ್ಯ ಹಾಳು, 50 ಲಕ್ಷ ಪರಿಹಾರ ನೀಡುವಂತೆ ಬಿಬಿಎಂಪಿಗೆ ವ್ಯಕ್ತಿಯ ನೋಟಿಸ್‌!

ಸಾರಾಂಶ

ಬೆಂಗಳೂರಿನ ರಿಚ್ಮಂಡ್ ಟೌನ್ ನಿವಾಸಿ ದಿವ್ಯ ಕಿರಣ್, ಹದಗೆಟ್ಟ ರಸ್ತೆಗಳಿಂದಾಗಿ ದೈಹಿಕ ಮತ್ತು ಮಾನಸಿಕ ಯಾತನೆ ಅನುಭವಿಸಿದ್ದಕ್ಕೆ ಬಿಬಿಎಂಪಿ ವಿರುದ್ಧ ₹50 ಲಕ್ಷ ಪರಿಹಾರ ಕೋರಿ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಬೆನ್ನುನೋವು, ಆತಂಕ, ಚಿಕಿತ್ಸಾ ವೆಚ್ಚ, ಮತ್ತು ಸಾಮಾನ್ಯ ಜೀವನದ ಮೇಲಾದ ಪರಿಣಾಮಗಳನ್ನು ಉಲ್ಲೇಖಿಸಿ, 15 ದಿನಗಳೊಳಗೆ ಪರಿಹಾರ ನೀಡದಿದ್ದರೆ ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಬೆಂಗಳೂರು (ಮೇ.20): ಬಹುಶಃ ಇಂಥದ್ದೊಂದು ನೋಟಿಸ್‌ಅನ್ನು ಬೆಂಗಳೂರಿನ ಪ್ರತಿ ಗಲ್ಲಿಯಲ್ಲಿರುವ ವ್ಯಕ್ತಿ ಬಿಬಿಎಂಪಿ ಅಥವಾ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಕಳಿಸಿದರೆ ಮಾತ್ರವೇ ಸರ್ಕಾರ ಹಾಗೂ ಪಾಲಿಕೆ ಬುದ್ದಿ ಕಲಿಯಬಹುದೇನೋ? ಬೆಂಗಳೂರಿನ 43 ವರ್ಷದ ವ್ಯಕ್ತಿಯೊಬ್ಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕಾನೂನು ನೋಟಿಸ್ ಕಳುಹಿಸಿದ್ದು, ನಗರದಲ್ಲಿನ ಹದಗೆಟ್ಟ ಮತ್ತು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳಿಂದ ಉಂಟಾದ "ದೈಹಿಕ ಯಾತನೆ ಮತ್ತು ಭಾವನಾತ್ಮಕ ಆಘಾತ"ಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದಾರೆ.

ರಿಚ್ಮಂಡ್ ಟೌನ್ ನಿವಾಸಿ ದಿವ್ಯ ಕಿರಣ್ ತಮ್ಮ ನೋಟಿಸ್‌ನಲ್ಲಿ, ತೆರಿಗೆ ಪಾವತಿಸುವ ನಾಗರಿಕನಾಗಿದ್ದರೂ, ಬಿಬಿಎಂಪಿಯ "ಮೂಲಭೂತ ನಾಗರಿಕ ಮೂಲಸೌಕರ್ಯವನ್ನು ನಿರ್ವಹಿಸುವಲ್ಲಿನ ಸ್ಪಷ್ಟ ವೈಫಲ್ಯ" ದಿಂದಾಗಿ "ನಿರಂತರ ದೈಹಿಕ ತೊಂದರೆ ಮತ್ತು ಮಾನಸಿಕ ಯಾತನೆಯನ್ನು" ಅನುಭವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. "ಆಳವಾದ ಗುಂಡಿಗಳು, ಮುರಿದ ಮತ್ತು ಅಸಮರ್ಪಕವಾದ ಮಾರ್ಗಗಳು ಮತ್ತು ಚಲಿಸಲಾಗದ ರಸ್ತೆ ಮೇಲ್ಮೈಗಳು" ಇದರಿಂದ ಓಡಾಟಕ್ಕೆ ಸಮಸ್ಯೆ ಆಗಿದೆ ಎಂದು ಬರೆದುಕೊಂಡಿದ್ದಾರೆ.

"ತೀವ್ರವಾದ ಕುತ್ತಿಗೆ ಮತ್ತು ಬೆನ್ನು ನೋವನ್ನು ಅನುಭವಿಸಿದ್ದಾರೆ, ಇದು ಈ ಅಪಾಯಕಾರಿ ರಸ್ತೆಗಳಲ್ಲಿ ಪ್ರಯಾಣಿಸುವಾಗ ಉಂಟಾಗುವ ಸೆಳೆತ ಮತ್ತು ಆಘಾತದಿಂದ ವೈದ್ಯಕೀಯವಾಗಿ ಸಂಬಂಧಿಸಿದೆ" ಎಂದು ಕಿರಣ್‌ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಈವರೆಗೂ ನಾನು ಮೂಳೆ ತಜ್ಞರೊಂದಿಗೆ ಐದು ಸಾರಿ ಭೇಟಿ ಮಾಡಿದ್ದು, ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ನಾಲ್ಕು ತುರ್ತು ಭೇಟಿಗಳನ್ನು ಮಾಡಿದ್ದಾಗಿ ತಿಳಿಸಿದ್ದಾರೆ. ತೀವ್ರವಾದ ನೋವನ್ನು ನಿವಾರಿಸಲು ಇಂಜೆಕ್ಷನ್ ಮತ್ತು ಚಿಕಿತ್ಸೆಗಳನ್ನು ಇಲ್ಲಿ ನೀಡಲಾಗಿದೆ ಎಂದಿದ್ದಾರೆ.

ಅವರು "ನೋವು, ನಿದ್ರೆಯ ನಷ್ಟ, ಆತಂಕ ಮತ್ತು ಮಾನಸಿಕ ಯಾತನೆಯಿಂದ ಕೆಲ ದಿನಗಳ ಕಾಲ ಅತ್ತಿದ್ದೇನೆ ಎಂದೂ ಹೇಳಿದ್ದಾರೆ. ಇದು ತಮ್ಮ ದೈನಂದಿನ ಜೀವನದ ಮೇಲೆ ತೀವ್ರ ರೂಪದಲ್ಲಿ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.

ರಸ್ತೆಗಳ ಅಪಾಯಕಾರಿ ಸ್ಥಿತಿಯಿಂದಾಗಿ, ಕಿರಣ್ "ಆಟೋ ಅಥವಾ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ. ಕ್ಯಾಬ್ ಸವಾರಿಗಳು ಸಹ ಅಸ್ವಸ್ಥತೆಯನ್ನು ಉಂಟುಮಾಡಿವೆ. ನನ್ನ ಓಡಾಟ ಹಾಗೂ ಸ್ವಾತಂತ್ರ್ಯವನ್ನು ಈ ಅಸಮರ್ಪಕ ನಿರ್ವಹಣೆಗಳು ಸೀಮಿತ ಮಾಡಿದೆ. ಇದು ವೈಯಕ್ತಿಕ ಮತ್ತು ವೃತ್ತಿಪರ ಬದ್ಧತೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

"ವೈದ್ಯಕೀಯ ವೆಚ್ಚಗಳು (ಹಿಂದಿನ ಮತ್ತು ನಿರೀಕ್ಷಿತ), ಭಾವನಾತ್ಮಕ ಯಾತನೆ ಮತ್ತು ಮಾನಸಿಕ ಯಾತನೆ, ದೈಹಿಕ ಯಾತನೆ ಮತ್ತು ಸಾಮಾನ್ಯ ಜೀವನದ ನಷ್ಟ, ವೈದ್ಯಕೀಯ ಸಮಾಲೋಚನೆಗಳಿಗಾಗಿ ಪ್ರಯಾಣದ ವೆಚ್ಚಗಳು" ಮತ್ತು "ಸಾರ್ವಜನಿಕ ರಸ್ತೆಗಳನ್ನು ನಿರ್ವಹಿಸುವಲ್ಲಿ ನಿಮ್ಮ ವೈಫಲ್ಯದಿಂದ ಉಂಟಾದ ಒಟ್ಟಾರೆ ಆಘಾತ" ಕ್ಕಾಗಿ ಬಿಬಿಎಂಪಿ 15 ದಿನಗಳಲ್ಲಿ 50 ಲಕ್ಷ ರೂ.ಗಳನ್ನು ಪಾವತಿಸಬೇಕೆಂದು ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ. ಕಾನೂನು ನೋಟಿಸ್ ಶುಲ್ಕಗಳಿಗೆ 10,000 ರೂ.ಗಳನ್ನು ಪಾವತಿಸುವಂತೆಯೂ ಒತ್ತಾಯ ಮಾಡಲಾಗಿದೆ.

ಪ್ರತಿಕ್ರಿಯಿಸಲು ವಿಫಲವಾದರೆ "ಅಗತ್ಯ ಮುಂದಿನ ಕಾನೂನು ಕ್ರಮಗಳು ಮತ್ತು ಕ್ರಿಮಿನಲ್ ಪ್ರಕರಣಗಳಿಗೆ" ಕಾರಣವಾಗಬಹುದು ಎಂದು ನೋಟಿಸ್ ಎಚ್ಚರಿಸಿದೆ. ಇದರಲ್ಲಿ ಹಾನಿಗಾಗಿ ಸಿವಿಲ್ ಮೊಕದ್ದಮೆ ಹೂಡುವುದು, ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡುವುದು ಮತ್ತು ಲೋಕಾಯುಕ್ತ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸುವುದು ಸೇರಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌