ಬಂದ್ ಆಗಲಿದೆ ಕೆ.ಆರ್‌.ಮಾರ್ಕೆಟ್‌ ಫ್ಲೈ ಓವರ್‌

By Web DeskFirst Published Dec 26, 2018, 9:23 AM IST
Highlights

ಪರ್ಯಾಯ ಮಾರ್ಗಗಳ ನೀಲ ನಕ್ಷೆ ಅಂತಿಮವಾಗದ ಹಿನ್ನೆಲೆಯಲ್ಲಿ ನಗರದ ಮೈಸೂರು ರಸ್ತೆಯ ಸಿರ್ಸಿ ಫ್ಲೈಓವರ್‌ ಗುಂಡಿ ಮುಕ್ತಗೊಳಿಸುವ ಕಾಮಗಾರಿ ಆರಂಭ ಎರಡು ದಿನ ತಡವಾಗಲಿದೆ. 

ಬೆಂಗಳೂರು :  ಪರ್ಯಾಯ ಮಾರ್ಗಗಳ ನೀಲ ನಕ್ಷೆ ಅಂತಿಮವಾಗದ ಹಿನ್ನೆಲೆಯಲ್ಲಿ ನಗರದ ಮೈಸೂರು ರಸ್ತೆಯ ಸಿರ್ಸಿ ಫ್ಲೈಓವರ್‌ ಗುಂಡಿ ಮುಕ್ತಗೊಳಿಸುವ ಕಾಮಗಾರಿ ಆರಂಭ ಎರಡು ದಿನ ತಡವಾಗಲಿದೆ.

ಡಿ.26ರಿಂದ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಿರ್ಸಿ ಫ್ಲೈಓವರ್‌ನಲ್ಲಿ ಅಧಿಕ ಪ್ರಮಾಣ ವಾಹನ ದಟ್ಟಣೆ ಇರುವುದರಿಂದ ಸಂಚಾರಿ ಮಾರ್ಗವನ್ನು ಬದಲಾವಣೆ ಮಾಡಬೇಕಾಗಲಿದೆ. ಹೀಗಾಗಿ, ಒಂದೆರಡು ದಿನ ಕಾಮಗಾರಿ ಆರಂಭ ವಿಳಂಬವಾಗಲಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಬಿಬಿಎಂಪಿಗೆ ಅನುಮತಿ ನೀಡಲಾಗುವುದು ಎಂದು ಪಶ್ವಿಮ ವಲಯದ ಉಪ ಪೊಲೀಸ್‌(ಸಂಚಾರಿ) ಆಯುಕ್ತೆ ಸೌಮ್ಯಾಲತಾ ತಿಳಿಸಿದ್ದಾರೆ.

ಏಕಾಏಕಿ ಫ್ಲೈಓವರ್‌ ಬಂದ್‌ ಮಾಡುವುದಕ್ಕೆ ಸಾಧ್ಯವಿಲ್ಲ. ಮಾರ್ಗ ಬದಲಾವಣೆಗೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದ್ದು, ಪೊಲೀಸ್‌ ಆಯುಕ್ತರ ಅನುಮತಿಗೆ ಕಳುಹಿಸಲಾಗಿದೆ. ಅನುಮತಿ ದೊರೆತ ತಕ್ಷಣ ಪ್ರಾಯೋಗಿಕ ಪರೀಕ್ಷೆ ನಡೆಸಿ, ನಂತರ ಫ್ಲೈಓವರ್‌ ಬಂದ್‌ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಸಿದ್ಧತೆ:  ಕಾಮಗಾರಿ ಆರಂಭಿಸುವುದಕ್ಕೆ ಈಗಾಗಲೇ ಬಿಬಿಎಂಪಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಫ್ಲೈಓವರ್‌ ಮೇಲ್ಭಾಗದ ಡಾಂಬಾರ್‌ ಮೇಲ್ಪದರವನ್ನು ತೆಗೆಯುವುದಕ್ಕೆ ಬೇಕಾದ ಯಂತ್ರವನ್ನು ತರಲಾಗಿದೆ. ಒಂದು ವಾರದಲ್ಲಿ ಒಂದು ಪಥದ ಡಾಂಬರ್‌ ಮೇಲ್ಪದರ ತೆಗೆಯಲಾಗುವುದು, ಬಳಿಕ ಟಿಕ್ಕಿಟಾರ್‌ ಶೀಟ್‌ ಹಾಕಿ ಮರು ಡಾಂಬರಿಕರಣ ಮಾಡಲಾಗುವುದು ಎಂದು ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

40 ದಿನ ಬೇಕು :  ಎರಡು ಬದಿಯ ನಾಲ್ಕು ಪಥ 2.65 ಕಿಲೋ ಮೀಟರ್‌ ಉದ್ದವಿದ್ದು, ಡಾಂಬರ್‌ ಮೇಲ್ಪದರ ತೆಗೆದು, ಟಿಕ್ಕಿಟಾರ್‌ ಶೀಟ್‌ ಹಾಕಿ, ಮರು ಡಾಂಬರ್‌ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಒಟ್ಟು 40 ದಿನ ಬೇಕಾಗಲಿದೆ. ಕಾಮಗಾರಿಗೆ ಬೇಕಾದ ಟಿಕ್ಕಿಟಾರ್‌ ಶೀಟ್‌ ಹಾಗೂ ಯಂತ್ರಗಳು ಸಿದ್ಧವಾಗಿವೆ. ರಾತ್ರಿ ವೇಳೆ ಕಾಮಗಾರಿ ನಡೆಲಾಗುವುದು ಎಂದು ಚಂದ್ರಶೇಖರ್‌ ಮಾಹಿತಿ ನೀಡಿದ್ದಾರೆ.

click me!