ಕೌಟುಂಬಿಕ ಕಲಹ ಬಗೆಹರಿಸಲು ಹಣ ಕೇಳಿದ ನಕಲಿ ಪೊಲೀಸ್‌!

By Web DeskFirst Published Jul 26, 2019, 11:06 AM IST
Highlights

ಪೊಲೀಸ್‌ ಸೋಗಿನಲ್ಲಿ ಕೌಟುಂಬಿಕ ಕಲಹ ಸಮಸ್ಯೆ ಇತ್ಯರ್ಥಪಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ .50 ಸಾವಿರ ಸುಲಿಗೆಗೆ ಯತ್ನಿಸಿದ ಕಿಡಿಗೇಡಿಯೊಬ್ಬ ಕೆ.ಜಿ.ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರು (ಜು. 26):  ಪೊಲೀಸ್‌ ಸೋಗಿನಲ್ಲಿ ಕೌಟುಂಬಿಕ ಕಲಹ ಸಮಸ್ಯೆ ಇತ್ಯರ್ಥಪಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ .50 ಸಾವಿರ ಸುಲಿಗೆಗೆ ಯತ್ನಿಸಿದ ಕಿಡಿಗೇಡಿಯೊಬ್ಬ ಕೆ.ಜಿ.ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಾಡುಗೊಂಡನಹಳ್ಳಿಯ ಚಾಂದ್‌ ಪಾಷಾ ಅಲಿಯಾಸ್‌ ನೇಮ್‌ ಪ್ಲೆಟ್‌ ಚಾಂದ್‌ ಬಂಧಿತ. ಕೌಟುಂಬಿಕ ಸಮಸ್ಯೆ ಸಂಬಂಧ ಕೆ.ಜಿ.ಹಳ್ಳಿ ಶಾಂಪುರ ಮುಖ್ಯರಸ್ತೆಯ 46 ವರ್ಷದ ವ್ಯಕ್ತಿಯೊಬ್ಬರಿಗೆ ಆರೋಪಿ ವಂಚಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರ ಪುತ್ರಿಯ ದಾಂಪತ್ಯದಲ್ಲಿ ವಿವಾದವಾಗಿತ್ತು. ಇದರಿಂದ ಅಳಿಯ ಮತ್ತು ಮಗಳು ಪ್ರತ್ಯೇಕವಾಗಿದ್ದರು. ಈ ಬಗ್ಗೆ ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ದಾಖಲಾದರೂ ಸಮಸ್ಯೆ ಬಗೆಹರಿದಿರಲ್ಲಿಲ್ಲ. ಈ ವಿಚಾರ ತಿಳಿದ ಆರೋಪಿ ಚಾಂದ್‌ ಪಾಷ, ದೂರುದಾರರನ್ನು ಸಂಪರ್ಕಿಸಿದ್ದಾನೆ.

‘ನಾನು ಪೊಲೀಸ್‌ ಕಾನ್‌ಸ್ಟೇಬಲ್‌ ಚಾಂದ್‌ ಪಾಷ. ನಿಮ್ಮ ಮಗಳ ಕುಟುಂಬದ ಕಲಹ ಇತ್ಯರ್ಥಪಡಿಸುತ್ತೇನೆ. ಅದಕ್ಕಾಗಿ .50 ಸಾವಿರ ನೀಡಬೇಕು’ ಎಂದಿದ್ದ. ಈ ಮಾತಿಗೆ ಒಪ್ಪಿದ ದೂರುದಾರರು, ಬುಧವಾರ ಸಂಜೆ 5.45ಕ್ಕೆ ಠಾಣೆ ಬಳಿಗೆ ತೆರಳಿದ್ದಾರೆ.

ಆ ವೇಳೆ ಮಫ್ತಿಯಲ್ಲಿ ನಿಂತಿದ್ದ ಚಾಂದ್‌, ಪಿರ್ಯಾದುದಾರರನ್ನು ನಾನೇ ಕ್ರೈಂ ಬ್ರಾಂಚ್‌ ಪೊಲೀಸ್‌. ನಿಮಗೆ ಕರೆ ಮಾಡಿ ಮಾತನಾಡಿದ್ದು ಎಂದು ಹೇಳಿದ್ದ. ಆದರೆ ಆತನ ನಡವಳಿಕೆ ಮೇಲೆ ಶಂಕೆಗೊಂಡ ಅವರು, ತಕ್ಷಣವೇ ಇನ್‌ಸ್ಪೆಕ್ಟರ್‌ಗೆ ತಿಳಿಸಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಇನ್‌ಸ್ಪೆಕ್ಟರ್‌, ಕೂಡಲೇ ತಮ್ಮ ಠಾಣೆಯಲ್ಲಿ ಚಾಂದ್‌ ಹೆಸರಿನ ಕಾನ್‌ಸ್ಟೇಬಲ್‌ನನ್ನು ಕರೆಸಿ ದೂರುದಾರರ ಮುಂದೆ ನಿಲ್ಲಿಸಿದ್ದಾರೆ. ಆಗ ನನ್ನ ಬಳಿ ಹಣ ಕೇಳಿದವರು ಇವರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಹಣ ಕೊಡುವುದಾಗಿ ಸಂತ್ರಸ್ತರ ಮೂಲಕ ಕರೆಸಿಕೊಂಡು ನಕಲಿ ಪೊಲೀಸ್‌ನನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಮ್ಮ ಠಾಣೆಯ ಕಾನ್‌ಸ್ಟೇಬಲ್‌ ಚಾಂದ್‌ ಹೆಸರನ್ನು ದುರುಪಯೋಗ ಪಡಿಸಿಕೊಂಡು ಸುಲಿಗೆಗೆ ಯತ್ನಿಸಿದ ಆರೋಪಿ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

 

click me!