ಮತ್ತೊಮ್ಮೆ ಆಪರೇಷನ್ ಕಮಲ ಫೇಲ್; ಮೈತ್ರಿಕೂಟ ತೆಕ್ಕೆಗೆ ಬಿಬಿಎಂಪಿ

By Web DeskFirst Published Sep 28, 2018, 1:03 PM IST
Highlights

ಹೈಡ್ರಾಮಕ್ಕೆ ಸಾಕ್ಷಿಯಾದ ಬಿಬಿಎಂಪಿ ಮೇಯರ್-ಉಪಮೇಯರ್ ಆಯ್ಕೆ | ಬಿಜೆಪಿಯಿಂದ ಬಹಿಷ್ಕಾರ |  ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ದಕ್ಕಿದ ಮೇಯರ್-ಉಪಮೇಯರ್ ಸ್ಥಾನ 

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ [ಬಿಬಿಎಂಪಿ] ನೂತನ ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆಯು ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.  ಇಲ್ಲೂ ಆಪರೇಷನ್ ಕಮಲಕ್ಕೆ ಯತ್ನಿಸಿದ್ದ ಬಿಜೆಪಿಗೆ ಮತ್ತೊಮ್ಮೆ ಮುಖಭಂಗವಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಮೇಯರ್ ಹಾಗೂ ಉಪಮೇಯರ್ ಪಟ್ಟ ಲಭಿಸಿದೆ.

ಚುನಾವಣಾ ಕಲಾಪವನ್ನು ಬಿಜೆಪಿ ಬಹಿಷ್ಕರಿಸಿದ್ದು ಮೇಯರ್ ಹುದ್ದೆಗೆ ಕಾಂಗ್ರೆಸ್‌ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ 253 ಸದಸ್ಯರು ಭಾಗಿಯಾಗಿದ್ದರು. ಆ ಪೈಕಿ ಗಂಗಾಂಬಿಕೆ ಅವರು 130 ಮತಗಳನ್ನು ಪಡೆದು ಬೆಂಗಳೂರಿನ ನೂತನ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಉಪ-ಮೇಯರ್ ಆಗಿ ಜೆಡಿಎಸ್‌ನ ರಮೀಳಾ ಉಮಾಶಂಕರ್ ಆಯ್ಕೆಯಾಗಿದ್ದಾರೆ.

ಕಳೆದೊಂದು ವಾರದಿಂದ ಬಿಬಿಎಂಪಿ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತೀವ್ರ ಕಸರತ್ತುಗಳನ್ನು ನಡೆಸುತ್ತಿದ್ದು, ಇಂದಿನ ಆಯ್ಕೆ ಕಲಾಪ ಗಲಾಟೆ ಗದ್ದಲಕ್ಕೆ ಕಾರಣವಾಯಿತು.  ತನ್ನ ಸೋಲು ಖಚಿತವಾಗುತ್ತಿದ್ದಂತೆ ಬಿಜೆಪಿ ಕಲಾಪವನ್ನು ಬಹಿಷ್ಕರಿಸಿದೆ. 

ಸತತ ನಾಲ್ಕನೇ ವರ್ಷವೂ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಕೂಟ ಕ್ರಮವಾಗಿ ಮೇಯರ್‌, ಉಪಮೇಯರ್‌ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದು,  ಮೈತ್ರಿ ಪಕ್ಷಗಳ ಪ್ರಯತ್ನ ವಿಫಲಗೊಳಿಸಿ ಈ ಬಾರಿ ಬಿಬಿಎಂಪಿಯಲ್ಲಿ ತನ್ನ ಅಧಿಕಾರದ ಗದ್ದುಗೆ ಸ್ಥಾಪಿಸಲು ಬಿಜೆಪಿ ಹವಣಿಸಿತ್ತು. ಈ ನಡುವೆ ಇಬ್ಬರು ಪಕ್ಷೇತರ ಸದಸ್ಯರನ್ನು ಬಿಜೆಪಿ ಹೈಜಾಕ್‌ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. 

click me!