
ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ನಡೆಯುತ್ತಿರುವ 16ನೇ ಚಿತ್ರ ಸಂತೆಯಲ್ಲಿ ಗಾಂಧಿ ಕುರಿತಂತೆ ಆಧುನಿಕ ಮತ್ತು ಸಮಕಾಲೀನ ಕಲಾವಿದರು ಜನರನು ಆಕರ್ಷಿಸುವ ಚಿತ್ರಸಂತೆ ಚಿತ್ರಕಲಾ ಪರಿಷತ್ತಲ್ಲಿ ನಡೆಯುತ್ತಿದೆ.
ಚಿತ್ರ ಸಂತೆ ಗಾಂಧೀಜಿ ಕುರಿತ ಸಾರವನ್ನು ನೆನಪಿಸಲಿದೆ. ಗಾಂಧೀಜಿ ಅವರು ಬೆಂಗಳೂರಿಗೆ ಬಂದಾಗಲೆಲ್ಲ ಕುಮಾರ ಕೃಪಾದಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಆ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್‌ನ ಆವರಣದ ಗಾಂಧಿ ಕುಟೀರದ ಕಲ್ಲು ಬಂಡೆ ಮೇಲೆ ವಿರಮಿಸಿದ್ದರು. ಈ ಎಲ್ಲಾ ಅಂಶಗಳು ಚಿತ್ರ ಸಂತೆಯಲ್ಲಿ ಕಲಾವಿದರ ಕೈಚಳಕದಿಂದ ಕಲಾಕೃತಿಗಳಲ್ಲಿ ನೋಡಬಹುದಾಗಿದೆ.
ಮುಖ್ಯಮಂತ್ರಿಗಳಿಂದ ಉದ್ಘಾಟನೆ: ‘ಮನೆಗೊಂದು ಕಲಾಕೃತಿ’ ಶೀರ್ಷಿಕೆಯಡಿ ಕರ್ನಾಟಕ ಚಿತ್ರಕಲಾ ಪರಿಷತ್‌ನಿಂದ ಆಯೋಜಿಸಿರುವ ಚಿತ್ರ ಸಂತೆ ಭಾನುವಾರ ಬೆಳಗ್ಗೆ 8ಕ್ಕೆ ಪ್ರಾರಂಭವಾಗಲಿದ್ದು, 10ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿರಲಿದ್ದಾರೆ. ಸಚಿವರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ, ಸಾ.ರಾ.ಮಹೇಶ್, ಡಾ.ಜಯಮಾಲಾ, ಸಂಸದರಾದ ಪಿ.ಸಿ.ಮೋಹನ್, ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಸದಸ್ಯ ಸಂಪತ್‌ಕುಮಾರ್ ಭಾಗವಹಿಸಲಿದ್ದಾರೆ. ಬಿದಿರಿನಿಂದ ನಿರ್ಮಿಸಿರುವ ಗಾಂಧಿ ಕುಟೀರವನ್ನು ಸಚಿವ ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ.
ಬೆಳಗ್ಗೆ 8ರಿಂದ ಆರಂಭ: ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಚಿತ್ರ ಸಂತೆ ನಡೆಯಲಿದ್ದು, ಸಂತೆ ಮುಗಿದ ತಕ್ಷಣ ಕಲಾವಿದರು ‘ಸ್ವಚ್ಛ ಭಾರತ ಅಭಿಯಾನ’ದ ಶೀರ್ಷಿಕೆಯಡಿ ಇಡೀ ರಸ್ತೆಯನ್ನು ಸ್ವಚ್ಛತೆ ಮಾಡಲಿದ್ದಾರೆ. ಈ ಬಾರಿ ಚಿತ್ರಕಲೆಯಲ್ಲಿ ವಿಶೇಷ ಸಾಧನೆ ಮಾಡಿದ 5 ಮಂದಿ ಕಲಾವಿದರಿಗೆ ‘ಚಿತ್ರಕಲಾ ಸಮ್ಮಾನ್’ ಪ್ರದಾನ ಮಾಡಲಾಗುತ್ತಿದೆ. ಗಣೇಶ್ ದೇಸಾಯ್, ಕೆ.ಸಿ.ರಮೇಶ್ ಮತ್ತಿತರ ಕಲಾವಿದರಿಂದ ಪರಿಷತ್ ಆವರಣದಲ್ಲಿ ಸಂಗೀತ ರಸ ಸಂಜೆ ಆಯೋಜಿಸಿದ್ದು, ಗ್ರಾಹಕರು ಹಾಗೂ ಸಂತೆ ವೀಕ್ಷಣೆಗೆ ಬರುವವರಿಗೆ ಮನೋರಂಜನೆ ಒದಗಿಸಲಿದ್ದಾರೆ.
ವಿಶೇಷ ವಾಹನ: ವಯಸ್ಸಾದವರು, ಅಂಗವಿಕಲರು ಹಾಗೂ ವಿಶೇಷ ಅತಿಥಿಗಳಿಗೆ ಚಿತ್ರ ಸಂತೆ ನೋಡಲು 4 ವಿಶೇಷ ವಾಹನ (ಎಲೆಕ್ಟ್ರಿಕ್ ವಾಹನ) ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮಳಿಗೆಗಳಲ್ಲಿಯೂ ಕ್ರೆಡಿಟ್ ಕಾರ್ಡ್ ಸೌಲಭ್ಯ ಕಲ್ಪಿಸಲಾಗಿದೆ. ತಿಂಡಿ-ತಿನಿಸು ಹಾಗೂ ಇತರ ಅಗತ್ಯ ಸಾಮಗ್ರಿಗಳ ಖರೀದಿಗಾಗಿ ವಿಶೇಷ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರದರ್ಶನದ ಆಯ್ದ ಸ್ಥಳಗಳಲ್ಲಿ ತಾತ್ಕಾಲಿಕ ಶೌಚಾಲಯಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಲಕ್ಷ ರು. ಬೆಲೆಬಾಳುವ ಕಲಾಕೃತಿಗಳು: .100ಗಳಿಂದ .1 ಲಕ್ಷಕ್ಕೂ ಮೇಲ್ಪಟ್ಟಚಿತ್ರಗಳ ಮಾರಾಟ, ಚಿತ್ರ ಬಿಡಿಸುವ ಪರಿಕರಗಳ ರಿಯಾಯಿತಿ ದರದ ಮಾರಾಟ, ಕಲಾವಿದರು ನಿಮ್ಮದೇ ಚಿತ್ರವನ್ನು ಸ್ಥಳದಲ್ಲೇ ಬರೆಸಿಕೊಳ್ಳಲು ಅವಕಾಶ, ಶಿವಾನಂದ ವೃತ್ತದ ಸಮೀಪದಿಂದ ವಿಂಡ್ಸರ್ ಮ್ಯಾನರ್ ಸೇತುವೆವರೆಗೆ 1 ಸಾವಿರ ಮಳಿಗೆಗಳ ವ್ಯವಸ್ಥೆಯಿದ್ದು, ಸಂತೆಗೆ ಉಚಿತ ಪ್ರವೇಶಕ್ಕೆ ಅವಕಾಶವಿದೆ.
ಪರ್ಯಾಯ ರಸ್ತೆ ಮಾರ್ಗ
ಶಿವಾನಂಂದ ವೃತ್ತದಿಂದ ವಿಂಡ್ಸ್ ಮ್ಯಾನರ್ ವರೆಗಿನ ಕುಮಾರಕೃಪಾ ರಸ್ತೆಯಲ್ಲಿ ಸಂತೆ ನಡೆಯಲಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮೆಜೆಸ್ಟಿಕ್ ಕಡೆಯಿಂದ ಬಳ್ಳಾರಿ ರಸ್ತೆ ಕಡೆಗೆ ಸಾಗುವ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳು ರೇಸ್‌ಕೋರ್ಸ್ ಜಂಕ್ಷನ್‌ನಿಂದ ಮುಂದೆ ಸಾಗಿ ಹಳೇ ಹೈಗ್ರೌಂಡ್ ಪೊಲೀಸ್ ಠಾಣೆ ಜಂಕ್ಷನ್, ವಿಂಡ್ಸರ್ ಮ್ಯಾನರ್ ಜಂಕ್ಷನ್ ಮುಖಾಂತರ ಗುಟ್ಟಹಳ್ಳಿಗೆ ತಲುಪಲಿವೆ. ಬಳ್ಳಾರಿ ರಸ್ತೆಯಿಂದ ಮೆಜೆಸ್ಟಿಕ್ ಮತ್ತು ಕೆ.ಆರ್.ಮಾರ್ಕೆಟ್ ಕಡೆಗೆ ಸಾಗುವ ವಾಹನಗಳು ವಿಂಡ್ಸರ್ ಮ್ಯಾನರ್ ವೃತ್ತ, ಹಳೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್, ಬಸವೇಶ್ವರ ವೃತ್ತದ ಮುಖಾಂತರ ಸಾಗಲು ಸೂಚನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.