ಶಬರಿಮಲೆ ಬಳಿಕ ಇದೀಗ ಅಗಸ್ತ್ಯಮಲೆಗೂ ಸ್ತ್ರೀ ಪ್ರವೇಶ!

By Web DeskFirst Published Jan 6, 2019, 9:17 AM IST
Highlights

ಶಬರಿಮಲೆ ಬಳಿಕ ಇದೀಗ ಅಗಸ್ತ್ಯಮಲೆಗೂ ಸ್ತ್ರೀ ಪ್ರವೇಶ| ಕೇರಳದ ಪರ್ವತಕ್ಕೆ ಮಹಿಳೆಯರೂ ಚಾರಣ ಹೋಗಬಹುದು| ಕೋರ್ಟ್‌ ಆದೇಶದಂತೆ ನಿರ್ಬಂಧ ತೆರವುಗೊಳಿಸಿದ ಕೇರಳ

ತಿರುವನಂತಪುರ[ಜ.06]: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸಿದ್ದು ತೀವ್ರ ಹಿಂಸಾಚಾರಕ್ಕೆ ಕಾರಣವಾಗಿರುವಾಗಲೇ, ಮಹಿಳೆಯರಿಗೆ ಅಘೋಷಿತ ನಿರ್ಬಂಧ ಇದ್ದ ಅಗಸ್ತ್ಯಮಲೆಗೆ ಚಾರಣ ಹೋಗಲು ಕೇರಳ ಸರ್ಕಾರ ಅನುವು ಮಾಡಿಕೊಟ್ಟಿದೆ.

ಅಗಸ್ತ್ಯಮಲೆಗೆ ಚಾರಣ ಹೋಗಲು ಆನ್‌ಲೈನ್‌ ನೋಂದಣಿಯನ್ನು ಕೇರಳದ ಅರಣ್ಯ ಇಲಾಖೆ ಶನಿವಾರದಿಂದ ಆರಂಭಿಸಿದ್ದು, ಅದರಲ್ಲಿ ಈ ಬಾರಿ ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿದೆ. ತಲಾ 1000 ರು. ಪಾವತಿಸಿ, ದಿನಕ್ಕೆ 100 ಮಂದಿ ಚಾರಣ ಕೈಗೊಳ್ಳಬಹುದಾಗಿದೆ.

ಅಗಸ್ತ್ಯ ಪರ್ವತದಲ್ಲಿ ಅಗಸ್ತ್ಯ ಮುನಿಗಳ ಮೂರ್ತಿ ಇದ್ದು, ಅದನ್ನು ಕನಿ ಬುಡಕಟ್ಟು ಜನಾಂಗದವರು ಆರಾಧಿಸುತ್ತಾರೆ. ಅಲ್ಲಿಗೆ ಮಹಿಳೆಯರು ಹೋಗಕೂಡದು ಎಂಬ ಸಂಪ್ರದಾಯ ಪಾಲನೆಯಾಗುತ್ತಿತ್ತು. ಈ ಸಂಬಂಧ ಕೇರಳ ಹೈಕೋರ್ಟಿನಲ್ಲಿ ಕಾನೂನು ಹೋರಾಟ ನಡೆದಿತ್ತು. 2019ರಿಂದ ಆರಂಭವಾಗಿರುವ ಚಾರಣ ಅವಧಿಯಲ್ಲಿ ಲಿಂಗದ ಆಧಾರದ ಮೇಲೆ ಯಾವುದೇ ನಿರ್ಬಂಧ ಹೇರಕೂಡದು ಎಂದು 2018ರ ನ.30ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಅದರ ಆಧಾರದಲ್ಲಿ ಕೇರಳ ಸರ್ಕಾರ ಮಹಿಳೆಯರ ಚಾರಣಕ್ಕೆ ಅನುಮತಿ ನೀಡಿದೆ.

ಜ.14ರಿಂದ ಮಾ.1ರವರೆಗೆ ಅಗಸ್ತ್ಯಮಲೆಗೆ ಚಾರಣ ಅವಕಾಶವಿರುತ್ತದೆ. ಕೇರಳ- ತಮಿಳುನಾಡು ಗಡಿಯ ನೆಯ್ಯಾರ್‌ ವನ್ಯಜೀವಿ ಧಾಮದಲ್ಲಿ ಈ ಪರ್ವತ ಇದ್ದು, 6129 ಅಡಿ ಎತ್ತರವಿದೆ. ತಿರುವನಂತಪುರದಿಂದ 50 ಕಿ.ಮೀ. ದೂರದಲ್ಲಿರುವ ಬೊನಕಾಡ್‌ವರೆಗೆ ವಾಹನಗಳು ಹೋಗುತ್ತವೆ. ಅಲ್ಲಿಂದ 28 ಕಿ.ಮೀ. ದೂರವನ್ನು ನಡೆದು ತಲುಪಬೇಕು. ಇದಕ್ಕೆ ಎರಡು ದಿನ ಬೇಕಾಗುತ್ತದೆ. ಸಂಜೆ ಹೊತ್ತು ಆನೆ, ಕಾಡುಕೋಣಗಳ ಹಾವಳಿ ಹೆಚ್ಚಿರುವುದರಿಂದ ಮೊದಲ ದಿನ 20 ಕಿ.ಮೀ.ಯನ್ನು ನಸುಕಿನ ಜಾವ ತಲುಪಬೇಕು. ಎರಡನೇ ದಿನ 8 ಕಿ.ಮೀ. ನಡೆಯಬೇಕು.

click me!