ಚೆನ್ನೈ- ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ ನಿರೀಕ್ಷೆ ಹುಸಿ!

By Web DeskFirst Published Jun 22, 2019, 9:00 AM IST
Highlights

ಚೆನ್ನೈ- ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ ಸದ್ಯಕ್ಕಿಲ್ಲ| ಜರ್ಮನಿ ಸಹಕಾರದಲ್ಲಿ ಕಾರ್ಯಸಾಧ್ಯತಾ ಅಧ್ಯಯನ ಪೂರ್ಣ| ಆದರೆ ಡಿಪಿಆರ್‌ ತಯಾರಿಸುವ ಉದ್ದೇಶ ಇಲ್ಲ: ಗೋಯಲ್‌

[ಜೂ.22]ನವದೆಹಲಿ: ಚೆನ್ನೈ- ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ ನಿರ್ಮಾಣ ಸದ್ಯೋಭವಿಷ್ಯದಲ್ಲಿ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಹೈಸ್ಪೀಡ್‌ ರೈಲಿನಲ್ಲಿ ಸಂಚರಿಸಲು ಈ ಮಾರ್ಗದ ಜನರು ಇನ್ನೂ ಹಲವು ವರ್ಷಗಳ ಕಾಲ ಕಾಯಬೇಕು.

ಈ ಮಾರ್ಗದ ಕುರಿತಂತೆ ಕಾರ್ಯಸಾಧ್ಯತಾ ಅಧ್ಯಯನವನ್ನು ಜರ್ಮನಿ ಸರ್ಕಾರದ ಸಹಕಾರದೊಂದಿಗೆ ಕೇಂದ್ರ ಸರ್ಕಾರ ನಡೆಸಿದೆ. ಆದರೆ ಸಂಪುಟ ಟಿಪ್ಪಣಿಯನ್ನು ಈವರೆಗೂ ಸಿದ್ಧಪಡಿಸಿಲ್ಲ. ಈ ಕಾರಿಡಾರ್‌ಗೆ ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಯೋಜನೆಯನ್ನು ರೈಲ್ವೆ ಹೊಂದಿಲ್ಲ ಎಂದು ಸ್ವತಃ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ರಾಜ್ಯಸಭೆಗೆ ಶುಕ್ರವಾರ ಲಿಖಿತ ಉತ್ತರ ನೀಡಿದ್ದಾರೆ. ಇದರೊಂದಿಗೆ ಹೈಸ್ಪೀಡ್‌ ರೈಲು ಯೋಜನೆ ಸದ್ಯಕ್ಕೆ ಶೈತ್ಯಾಗಾರ ಸೇರಿದಂತಾಗಿದೆ.

ಮುಂಬೈ- ಅಹಮದಾಬಾದ್‌ ನಡುವೆ ಜಪಾನ್‌ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಹೈಸ್ಪೀಡ್‌ ರೈಲು ಮಾರ್ಗ ನಿರ್ಮಾಣ ಮಾಡುತ್ತಿದೆ. ಅಂತಹುದೇ ಮಾರ್ಗ ಚೆನ್ನೈ- ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಈ ಕುರಿತು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವುದಾಗಿ ರೈಲ್ವೆ ಸಚಿವಾಲಯ ಹೇಳಿಕೊಂಡು ಬಂದಿತ್ತು. ಆದರೆ ಈ ಮಾರ್ಗದಲ್ಲಿ ಸಾಕಷ್ಟುತಿರುವುಗಳು ಬರುವುದರಿಂದ ಹೈಸ್ಪೀಡ್‌ ರೈಲು ಮಾರ್ಗ ನಿರ್ಮಾಣ ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದರು.

ಇದರ ನಡುವೆಯೂ ಕಾರ್ಯಸಾಧ್ಯತಾ ಅಧ್ಯಯನವನ್ನು ರೈಲ್ವೆ ಕೈಗೊಂಡಿತ್ತು. ಅದರಲ್ಲಿ ಯಾವ ಸಂಗತಿಗಳು ಇವೆ ಎಂಬುದು ತಿಳಿದುಬಂದಿಲ್ಲ. ಆದರೆ ಡಿಪಿಆರ್‌ ಸಿದ್ಧಪಡಿಸುವ ಯೋಜನೆ ಸದ್ಯಕ್ಕಿಲ್ಲ ಎಂದು ಸರ್ಕಾರ ಹೇಳಿರುವುದರಿಂದ ಬಹುತೇಕ ಈ ಯೋಜನೆ ಕೈಬಿಟ್ಟಂತೆಯೇ ಎನ್ನಲಾಗುತ್ತಿದೆ.

click me!