
ಬೆಂಗಳೂರು : ಕಳೆದ 12 ದಿನಗಳ ಹಿಂದೆಯಷ್ಟೇ ಬೆಳ್ಳಂದೂರು ಕೆರೆಯಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದ ಬೆಂಕಿ ಗುರುವಾರ ಮತ್ತೊಮ್ಮೆ ಕಾಣಿಸಿಕೊಂಡಿರುವುದು ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ.
ಕೆರೆಯ ಪಶ್ಚಿಮ ಭಾಗದಲ್ಲಿರುವ ಈಜೀಪುರದ ಸಮೀಪ ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕಳೆದ ಬಾರಿ ಕಾಣಿಸಿಕೊಂಡಿದ್ದ ಸಮೀಪದಲ್ಲಿಯೇ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಬಿಡಿಎ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗ್ನಿಶಾಮಕದಳ 20 ಮತ್ತು 25ಕ್ಕೂ ಹೆಚ್ಚಿನ ಸೇನಾ ಸಿಬ್ಬಂದಿ ಬೆಂಕಿ ಶಮನಗೊಳಿಸಲು ಹರಸಾಹಸ ಪಟ್ಟರು. ಬೆಂಕಿ ಕಾಣಿಸಿಕೊಂಡಿದ್ದ ಜಾಗವು ಜೊಂಡು ಮತ್ತು ಹೂಳಿನಿಂದ ಕೂಡಿದ್ದರಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಕಾರ್ಯಾಚರಣೆ ನಡೆಸಲು ಸಾಕಷ್ಟು ಕಷ್ಟಪಡಬೇಕಾಯಿತು. ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಾತ್ರಿ 7.30ರ ಸುಮಾರಿಗೆ ಬೆಂಕಿ ನಂದಿಸಿದರು. ಈ ಕುರಿತು ಮಾತನಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಯು, ಬೆಂಕಿ ಕಾಣಿಸಿಕೊಂಡ ಆರಂಭದಲ್ಲಿಯೇ ಎಚ್ಚೆತ್ತುಕೊಂಡು ಕಾರ್ಯಾಚರಣೆ ನಡೆಸಿದ್ದರಿಂದ ಮುಂದಿನ ಅನಾಹುತ ಸಂಭವಿಸಿಲ್ಲ. ಬೇಗ ಎಚ್ಚೆತ್ತುಕೊಳ್ಳದಿದ್ದರೆ, ಕಳೆದ ಬಾರಿಗಿಂತ ದೊಡ್ಡ ಮಟ್ಟದಲ್ಲಿ ಬೆಂಕಿಯ ಜ್ವಾಲೆ ಆವರಿಸುತ್ತಿತ್ತು ಎಂದರು.
ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಕಳೆದ ಬಾರಿ ಕಾಣಿಸಿಕೊಂಡ ಪಕ್ಕದಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ಕಾರಣ ತಿಳಿದುಬಂದಿಲ್ಲ. ಬೆಂಕಿ ಕಾಣಿಸಿಕೊಂಡ ಜಾಗದಲ್ಲಿ ಮಾದರಿ ಸಂಗ್ರಹಿಸಲಾಗಿದೆ. ಒಣ ಹುಲ್ಲು ಇರುವುದರಿಂದ ಸ್ಥಳೀಯರೇ ಬೆಂಕಿ ಹಚ್ಚಿರಬಹುದು ಎಂದು ಊಹಿಸಲಾಗಿದೆ. ಆದರೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದರು. ಕಳೆದ ಬಾರಿ ಬೆಂಕಿ ಕಾಣಿಸಿಕೊಂಡ ಮಾದರಿ ವರದಿ ಬಂದಿದೆ.
ವರದಿಯಲ್ಲಿ ಮಿಥೇನ್ ಪ್ರಮಾಣ 00.2 ಅಷ್ಟೇ ಇದೆ. ಬೆಂಕಿ ಕಾಣಿಸಿಕೊಳ್ಳಲು ಕನಿಷ್ಠ ಶೇ.5ರಷ್ಟು ಮಿಥೇನ್ ಅಂಶವಿದ್ದಾಗ ಮಾತ್ರ ಬೆಂಕಿ ಕಾಣಿಸಿಕೊಳ್ಳಲಿದೆ. ಗುರುವಾರ ಕೂಡ ಮಾದರಿ ಸಂಗ್ರಹಿಸಿದ್ದು, 3ರಿಂದ 4 ದಿನಗಳಲ್ಲಿ ವರದಿ ಬರಲಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.