
ಈ ಎಎಸ್'ಐನಿಂದ ನೆರವು ಪಡೆದ ಮಹಿಳೆ ನಿರ್ಮಲಾ ರಾಜೇಶ್ ಇಡೀ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿ ಕೃತಜ್ಞತೆ ಅರ್ಪಿಸಿದ್ದರು. ಈ ಪೋಸ್ಟ್ ವೈರಲ್ ಆಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಅವರು ಸಹಾಯಕ ಸಬ್‌ಇನ್ಸ್'ಪೆಕ್ಟರ್'ಗೆ ಶ್ಲಾಘನೆ ಸಲ್ಲಿಸಿದ್ದಾರೆ.
ನಡುದಾರಿಯಲ್ಲಿ ಪೆಟ್ರೋಲ್ ಖಾಲಿ: ನಿರ್ಮಲಾ ರಾಜೇಶ್ ಅವರು ಗುರುವಾರ ಕಚೇರಿ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ರಾತ್ರಿ 8.30ರ ಸುಮಾರಿಗೆ ಮಾರ್ಗದ ಜೆ.ಸಿ. ನಗರದ ಟೀವಿ ಟವರ್ ಬಳಿ ಪೆಟ್ರೋಲ್ ಖಾಲಿಯಾಗಿ ದ್ವಿಚಕ್ರ ವಾಹನ ನಿಂತಿದೆ. ಈ ವೇಳೆ ಆ ರಸ್ತೆಯಲ್ಲಿ ಹೆಚ್ಚು ಜನ ಸಂಚಾರ ಇರಲಿಲ್ಲ. ಅಲ್ಲದೆ ಸುತ್ತಮುತ್ತ ಪೆಟ್ರೋಲ್ ಬಂಕ್'ಗಳು ಕೂಡ ಇರಲಿಲ್ಲ. ಈ ವೇಳೆ ಪತಿಗೆ ಕರೆ ಮಾಡಿ ಪೆಟ್ರೋಲ್ ತರಲು ಹೇಳಿ ದ್ವಿಚಕ್ರ ವಾಹನದ ಜತೆ ನಿಂತಿದ್ದರು. ಈ ವೇಳೆ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನಾರಾಯಣ ಅವರು ನಿರ್ಮಲಾ ಒಬ್ಬಂಟಿಯಾಗಿ ನಿಂತಿರುವುದನ್ನು ಕಂಡು ವಿಚಾರಿಸಿದಾಗ ಪೆಟ್ರೋಲ್ ಮುಗಿದಿರುವುದು ತಿಳಿದಿದೆ.
ಕೂಡಲೇ ಅವರು, ಇಂತಹ ಹೊತ್ತಿನಲ್ಲಿ ಈ ಜಾಗ ಸರಿಯಿಲ್ಲ ಮತ್ತು ಸುರಕ್ಷಿತವಲ್ಲ. ಪತಿ ಬರುವವರೆಗೂ ಇಲ್ಲಿರುವುದು ಬೇಡ. ನನ್ನ ದ್ವಿಚಕ್ರ ವಾಹನ (ಸ್ಕೂಟರ್) ವನ್ನು ಓಡಿಸಿಕೊಂಡು ಮೇಖ್ರಿ ವೃತ್ತಕ್ಕೆ ಹೋಗಿ. ನಾನು ನಿಮ್ಮ ದ್ವಿಚಕ್ರ ವಾಹನ ತಳ್ಳಿಕೊಂಡು ಹಿಂದೆಯೇ ಬರುತ್ತೇನೆ ಎಂದು ತಮ್ಮ ದ್ವಿಚಕ್ರ ವಾಹನವನ್ನು ನಿರ್ಮಲಾ ಅವರಿಗೆ ನೀಡಿದ್ದಾರೆ. ನಾರಾಯಣ ಅವರ ಮಾತಿನಂತೆ ನಿರ್ಮಲಾ ಮೇಖ್ರಿ ವೃತ್ತಕ್ಕೆ ಬಂದಿದ್ದಾರೆ. ಕೆಲ ನಿಮಿಷದ ಬಳಿಕ ನಿರ್ಮಲಾ ಅವರ ಪತಿ ಪೆಟ್ರೋಲ್ ತೆಗೆದುಕೊಂಡು ಬಂದಿದ್ದಾರೆ. ಬಳಿಕ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಕೊಂಡು ದಂಪತಿ ತೆರಳಿದರು.
ಅನಂತರ ನಿರ್ಮಲಾ ಅವರು ಇಡೀ ಘಟನೆಯನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ವಿವರಿಸಿದ್ದಾರೆ. ಅಂತೆಯೆ ನಾರಾಯಣ ಅವರ ಸಹಾಯದಿಂದ ನಾನು ಸುರಕ್ಷಿತವಾಗಿ ಮನೆ ಸೇರಿಕೊಂಡೆ ಎಂದು ಧನ್ಯವಾದ ಅರ್ಪಿಸಿದ್ದಾರೆ. ಪೊಲೀಸರು ಎಂದರೆ ಪೊಲೈಟ್ ಜತೆಗೆ ಸ್ನೇಹಿತರು ಕೂಡ ಎಂಬುದಕ್ಕೆ ತಮ್ಮ ಅನುಭವವೇ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ನಾರಾಯಣ ಅವರ ಜನಪರ ಕಾರ್ಯವನ್ನು ಪ್ರಶಂಸಿಸಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು 15 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ.
ಆಗಿದ್ದೇನು?
* ಕಚೇರಿಯಿಂದ ಮನೆಗೆ ತೆರಳುವಾಗ ನಿರ್ಮಲಾ ರಾಜೇಶ್ ಸ್ಕೂಟರ್‌ನ ಪೆಟ್ರೋಲ್ ಖಾಲಿ
* ಪತಿಗಾಗಿ ಕಾಯುತ್ತಿದ್ದಾಗ ಸ್ಥಳಕ್ಕೆ ಬಂದ ಕೆ.ಜಿ.ಹಳ್ಳಿ ಟ್ರಾಫಿಕ್ ಎಎಸ್‌ಐ ನಾರಾಯಣ್
* ಈ ವೇಳೆ ಇಲ್ಲಿ ನಿಲ್ಲುವುದು ಸರಿಯಲ್ಲ, ತನ್ನ ಸ್ಕೂಟರ್ ಕೊಂಡೊಯ್ಯುವಂತೆ ಸಲಹೆ
* ಅದರಂತೆ ನಿರ್ಮಲಾ ಮೇಖ್ರಿ ವೃತ್ತದಲ್ಲಿ ಕಾಯುತ್ತಿದ್ದಾಗ ಅಲ್ಲಿವರೆಗೆ ಆಕೆ ಸ್ಕೂಟರ್ ತಳ್ಳಿ ಹೋಗಿ ಕೊಟ್ಟಎಎಸ್‌ಐ
* ಇಡೀ ಘಟನೆ ಫೇಸ್‌ಬುಕ್‌ನಲ್ಲಿ ವಿವರಿಸಿ ಕೃತಜ್ಞತೆ ಸಲ್ಲಿಸಿರುವ ನಿರ್ಮಲಾ ರಾಜೇಶ್
* ನಾರಾಯಣ್ ಸಹಾಯಹಸ್ತಕ್ಕೆ ನೂರಾರು ಜನರ ಶ್ಲಾಘನೆ
ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದೆ. ಮಾರ್ಗದಲ್ಲಿ ಮಹಿಳೆ ಒಂಟಿಯಾಗಿ ನಿಂತಿರುವುದನ್ನು ಕಂಡು ವಿಚಾರಣೆ ಮಾಡಿದಾಗ ಪೆಟ್ರೋಲ್ ಖಾಲಿಯಾಗಿರುವುದು ಗೊತ್ತಾಯಿತು. ಹಾಗಾಗಿ ಅವರಿಗೆ ನನ್ನ ದ್ವಿಚಕ್ರ ವಾಹನ ಕೊಟ್ಟು ಮೇಖ್ರಿ ವೃತ್ತಕ್ಕೆ ಕಳುಹಿಸಿದೆ. ಕೆಲ ಸಂದರ್ಭಗಳಲ್ಲಿ ಪೊಲೀಸರಿಗೂ ಹಲವರು ಸಹಾಯ ಮಾಡಿರುತ್ತಾರೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೆ.
- ನಾರಾಯಣ, ಎಎಸ್'ಐ, ಕೆ.ಜಿ.ಹಳ್ಳಿ ಸಂಚಾರ ಠಾಣೆ
ಕನ್ನಡಪ್ರಭ ವಾರ್ತೆ
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.