
ಬಳ್ಳಾರಿ(ಫೆ. 28): ಗಣಿನಾಡಿನಲ್ಲಿ ಯಾವುದೇ ಕಾಮಗಾರಿ ನಡೆಯಲಿ ಅಲ್ಲಿ ಅಕ್ರಮಗಳದ್ದೇ ಕಾರುಬಾರು ಎಂಬ ಮಾತಿದೆ. ಇದನ್ನು ಯಾರಾದ್ರೂ ಪ್ರಶ್ನಿಸಿದ್ರೆ ಅವರು ನೆಮ್ಮದಿಯ ಜೀವನ ನಡೆಸೋದು ಕಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಂಡೂರಿನ ಕುಟುಂಬವೊಂದು ಇದೇ ರೀತಿ ನಿರಂತರ ಕಿರುಕುಳ ಅನುಭವಿಸುತ್ತಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ 2013ರಲ್ಲಿ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಎಂಬುವರು ದೂರು ನೀಡಿದ್ರು. ಇದರಿಂದ ಮಲ್ಲಿಕಾರ್ಜುನ ಮೇಲೆ ಕೊಲೆ ಯತ್ನ ಕೂಡ ನಡೆಸಲಾಗಿತ್ತು. ಈ ಬಗ್ಗೆ ಮಲ್ಲಿಕಾರ್ಜುನ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ರು.
ಬಿಲ್ ಕಲೆಕ್ಟರ್ ಫಕೀರನ ಸಹೋದರ ಲೋಕೇಶ್ ಸುಶೀಲ ಗ್ರಾಮ ಪಂಚಾಯತ್ ಸದಸ್ಯ. ಜೊತೆಗೆ ಸಚಿವ ಸಂತೋಷ್ ಲಾಡ್ ಆಪ್ತ. ಇದರಿಂದ ರಾಜಕೀಯ ಪ್ರಭಾವ ಬಳಸಿಕೊಂಡು, ಮಲ್ಲಿಕಾರ್ಜುನ ಕುಟುಂಬದ ಮೇಲೆ ದೂರು ವಾಪಸ್ ತೆಗೆದುಕೊಳ್ಳುವಂತೆ ದೌರ್ಜನ್ಯವೆಸಗುತ್ತಿದ್ದಾರೆ. ಆರೋಪಿ ಲೋಕೇಶ್, ಮಲ್ಲಿಕಾರ್ಜುನನ ಅಣ್ಣನ ಮಗಳ ಮೂಲಕ ಬ್ಲಾಕ್'ಮೇಲ್'ಗೆ ಮುಂದಾಗಿದ್ದು ಬಾಲಕಿಗೂ ಕಿರುಕುಳ ನೀಡಿದ್ದಾನೆ. ಜತೆಗೆ ಮಲ್ಲಿಕಾರ್ಜುನನ ಅಕ್ಕ ಖೀರ ಭಾಯಿ ಮೇಲೂ ಸಂತೋಷ್ ಲಾಡ್ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹಲ್ಲೆ ಹಾಗೂ ಬ್ಲ್ಯಾಕ್'ಮೇಲ್ ಬಗ್ಗೆ ಸಂಡೂರು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಬಳ್ಳಾರಿಯ ಎಸ್'ಪಿ ಕಚೇರಿಯಲ್ಲಿ ದೂರು ನೀಡಿದ್ದು, ಎಸ್'ಪಿ ಅನುಚೇತನ್ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಂದು ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಎಸ್'ಪಿ ಚೇತನ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.
ಇದೇ ವೇಳೆ, ಸುವರ್ಣನ್ಯೂಸ್ ಜೊತೆ ಮಾತನಾಡಿರುವ ದೂರುದಾರ ಮಲ್ಲಿಕಾರ್ಜುನ್ ಅವರು, ತಮ್ಮ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯ ನಿಲ್ಲದೇ ಹೋದರೆ ತಮ್ಮ ಇಡೀ ಕುಟುಂಬದೊಂದಿಗೆ ವಿಧಾನಸೌಧದ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ: ಶ್ರೀನಿವಾಸಶೆಟ್ಟಿ, ಬಳ್ಳಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.