
ಬಳ್ಳಾರಿ(ಆ. 27): ಜಲಾಶಯದಲ್ಲಿರುವ ನೀರು ಬಿಟ್ಟು ರೈತರ ಪ್ರಾಣ ಉಳಿಸಿ, ಇಲ್ಲವಾದರೆ ರೈತರು ಕಣ್ಣೀರಲ್ಲಿ ಕೈತೊಳೆಯಬೇಕಾಗುತ್ತೆ. ದಯಮಾಡಿ ರೈತರ ಸಂಕಷ್ಟಕ್ಕೆ ನೆರವಾಗಿ ಎಂದು ಅಳಲು ತೋಡಿಕೊಳ್ಳುತ್ತಿರುವ ರೈತರು.... ಈಗೀರುವ ನೀರು ಬಿಡಲು ಕಷ್ಟಸಾಧ್ಯ. ಜಲಾಶಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೀರಿನ ಸಂಗ್ರಹ ಕುಸಿದಿದೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿರುವ ಸಚಿವರು....
ಇದೆಲ್ಲಾ ಕಂಡುಬಂದದ್ದು ಬಳ್ಳಾರಿ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಕರೆಯಲಾಗಿದ್ದ ರೈತ ಸಮನ್ವಯ ಸಮಿತಿ ಸಭೆಯಲ್ಲಿ ಈ ಮಾತುಗಳು ಕೇಳಿಬಂದವು. ಜಲಾಶಯದಿಂದ ಒಂದು ಬೆಳೆಗಾದರೂ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತೆ. ಇಲ್ಲವಾದರೆ ಮತ್ತಷ್ಟು ಸಂಕಷ್ಟಕ್ಕೀಡಾಗಬೇಕಾಗುತ್ತೆ ಎಂದು ರೈತರು ಸಭೆಯಲ್ಲಿ ಮನವಿ ಮಾಡಿಕೊಂಡರು. ಈ ವೇಳೆ, ಸಚಿವರಿಗೆ ಮತ್ತು ರೈತರಿಗೆ ಕೆಲಕಾಲ ವಾಗ್ವಾದ ನಡೆಯಿತು. ಆದ್ರೆ ಸಚಿವರು ಮತ್ತು ಜಲಾಶಯ ಅಧಿಕಾರಿಗಳು ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಸಭೆಯಲ್ಲಿ ಗದ್ದಲ, ಗೊಂದಲಕ್ಕೆ ಕಾರಣವಾಯ್ತು. ನಂತರ ಮಾತನಾಡಿದ ಸಚಿವರು ಇದೇ ತಿಂಗಳು 29 ರಂದು ಸಭೆ ಕರೆದು ತಿರ್ಮಾನಿಸುವ ನಿರ್ಧಾರಕ್ಕೆ ಬರಲಾಗುವುದು ಎನ್ನುವ ಬರವಸೆ ನೀಡಿದ್ದಾರೆ.
ಜಿಲ್ಲೆಯ ಭತ್ತದ ಕಣಜವಾಗಿದ್ದ ಕೆಲ ತಾಲೂಕುಗಳು ಈ ಬಾರಿ ಒಂದು ಬೆಳೆ ಕಾಣುವುದೇ ಕನಸೆಂಬಂತಾಗಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ ಒಟ್ಟು 3.65 ಲಕ್ಷ ಹೆಕ್ಟರ್ ಬಿತ್ತನೆಯಾಗುತ್ತಿತ್ತು. ಇದೀಗ ಮಳೆ ಅಭಾವದಿಂದ 1.63 ಲಕ್ಷ ಹೆಕ್ಟರ್ ಮಾತ್ರ ಬಿತ್ತನೆಯಾಗಿದೆ. ತುಂಗಭದ್ರ ಜಲಾಶಯದಿಂದ ನೀರು ಹರಿಸದ ಹಿನ್ನೆಲೆ ಕೆಲ ತಾಲೂಕುಗಳಲ್ಲಿ ಬಿತ್ತನೆಯೇ ಆಗಿಲ್ಲ. ಅಲ್ಪಸ್ವಲ್ಪ ಮಳೆಗೆ ಬಿತ್ತನೆಯಾದ ಬೆಳೆ ಮೊಳಕೆ ಒಡೆಯದೆ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ನೀರಿನ ಅಭಾವವನ್ನ ನೀಗಿಸಲು ಅಲ್ಪಾವಧಿ ಬೆಳೆಗಳನ್ನ ಪರ್ಯಾಯವಾಗಿ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ರೈತರನ್ನ ಸತತ ಮೂರು ವರ್ಷಗಳಿಂದ ಬರದ ಛಾಯೆ ಬೆಂಬಿಡದೆ ಕಾಡುತ್ತಿದ್ದು ವಾಡಿಕೆಯಂತೆ 257 ಮಿ.ಮೀಟರ್ ಮಳೆಯಾಗಬೇಕಿತ್ತು. ಆದರೆ ಮಳೆರಾಯನ ಮುನಿಸಿನಿಂದ 190 ಮಿಮೀ. ಮಳೆಯಾಗಿದ್ದು ರೈತರು ಬೆಳೆದ ಬೆಳೆ ಕೈಸೇರುವುದು ಅನುಮಾನ ಇದೆ. ಅಲ್ಪಾವಧಿ ಬೆಳೆಗಳಿಗಾದರೂ ಆಫ್ ಅಂಡ್ ಆನ್ ವ್ಯವಸ್ಥೆಯಲ್ಲಿ ನೀರು ಬಿಡಿ. ಇಲ್ಲವಾದರೆ ರೈತನಿಗೆ ಪರಿಹಾರವಾದರೂ ನೀಡಿ ಎಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ವರದಿ: ಶ್ರೀನಿವಾಸಶೆಟ್ಟಿ, ಸುವರ್ಣನ್ಯೂಸ್, ಬಳ್ಳಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.