20 ಸೈನಿಕರ ಗ್ರೆನೇಡ್‌ನಿಂದ ರಕ್ಷಿಸಿ ಗೋಕಾಕ ಯೋಧ ಹುತಾತ್ಮ

By Web DeskFirst Published Oct 22, 2018, 7:26 AM IST
Highlights

ಕನ್ನಡ ನಾಡಿದ ಯೋಧನೋರ್ವ ತನ್ನ ಪ್ರಾಣದ ಹಂಗು ತೊರೆದು ಉಗ್ರರು ಎಸೆದ ಗ್ರೆನೇಡ್ ಹಿಡಿದು ವಾಹನದಿಂದ ಕೆಳಕ್ಕೆ ಜಿಗಿದು 20 ಯೊಧರ ಪ್ರಾಣವನ್ನು ರಕ್ಷಿಸಿ, ತಾವು ಹುತಾತ್ಮರಾಗಿದ್ದಾರೆ. 

ಬೆಳಗಾವಿ/ಇಂಫಾಲ: ಶಂಕಿತ ಉಗ್ರವಾದಿಗಳು ನಡೆಸಿದ ಗ್ರೆನೇಡ್ ದಾಳಿಯೊಂದರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಯೋಧರೊಬ್ಬರು ತನ್ನೊಂದಿಗಿದ್ದ 20 ಸೈನಿಕರನ್ನು ರಕ್ಷಿಸಿ ಹುತಾತ್ಮರಾಗಿರುವ ಘಟನೆ ಮಣಿಪುರ ರಾಜಧಾನಿ ಇಂಪಾಲದಲ್ಲಿ ಶನಿವಾರ ಸಂಭವಿಸಿದೆ.  ಇದೇ ಘಟನೆಯಲ್ಲಿ ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್‌ನ 143 ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಎಂ. ಹೆಳವರ ಹುತಾತ್ಮರಾದ ವೀರ ಯೋಧ.

"

ಇವರ ಜತೆಯಲ್ಲಿದ್ದ 109 ನೇ ಬೆಟಾಲಿಯನ್‌ನ ತಮಿಳುನಾಡು ಮೂಲದ ಎನ್. ರಾಮರಾಜನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಮೇಶ್ ಹೆಳವರ ಸಾವಿಗೆ ಕಾರಣರಾದವರನ್ನು ಹುಡುಕಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಗುಡುಗಿದ್ದಾರೆ. ಮೃತಯೋಧ ಅವರಿಗೆ ತಂದೆ ಮಹಾನಿಂಗ, ತಾಯಿ ಯಮನವ್ವ, ಸಹೋದರರಾದ ರಮೇಶ, ಕಲ್ಲಪ್ಪ ಮತ್ತು ಅಪಾರ ಬಂಧು ಬಳಗ ಇದ್ದಾರೆ. 

ಅ.27 ರಂದು ದೀಪಾವಳಿ ರಜೆಯಲ್ಲಿ ಮನೆಗೆ ಬರುವುದಾಗಿ ತಿಳಿಸಿದ್ದ ವೀರಯೋಧನ ದಾರಿ ಕಾಯುತ್ತಿದ್ದ ಹೆತ್ತವರು, ಕುಟುಂಬಸ್ಥರು ಇದೀಗ ಅಪಾರ ದುಖದಲ್ಲಿ ಮಳುಗಿದ್ದಾರೆ. ಸೋಮವಾರದಂದು ಹುತಾತ್ಮ ಯೋಧ ಉಮೇಶ ಅವರ ಪಾರ್ಥಿವ ಶರೀರ ಹುಟ್ಟೂರಿಗೆ ತರಲಾಗುತ್ತಿದ್ದು, ಬೆಳಗ್ಗೆ 10 ಗಂಟೆಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆ: ಯೋಧ ಉಮೇಶನ ಅಂತಿಮ ಕಾರ್ಯಕ್ಕೆ ಪ್ರತ್ಯೇಕ ಸ್ಥಳ ನೀಡುವಂತೆ ಆಗ್ರಹಿಸಿ ಮೃತ ಉಮೇಶನ ಸ್ನೇಹಿತರು, ಗ್ರಾಮಸ್ಥರು, ಹಿಂದೂಪರ ಸಂಘಟನೆಗಳು ಮತ್ತು ಭಾನುವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಇಂಫಾಲದಲ್ಲಿ ಆಗಿದ್ದೇನು..?

ಇಂಫಾಲದ ಮಾರುಕಟ್ಟೆಯಿಂದ ಅವಶ್ಯಕ ವಸ್ತುಗಳನ್ನು ತುಂಬಿಕೊಂಡು ಸಿಆರ್‌ಪಿಎಫ್ ಟ್ರಕ್ ಕಾಂಗ್ಲಾಟೊಂಬಿಯಲ್ಲಿರುವ ತರಬೇತಿ ಕೇಂದ್ರದತ್ತ ಹೊರಟಿತ್ತು. ಆ ವಾಹನದಲ್ಲಿ ಉಮೇಶ್ ಎಂ. ಹೆಳವರ್ ಹಾಗೂ ರಾಮರಾಜನ್ ಅವರು ಹಿಂಬದಿ ಕುಳಿತಿದ್ದರು. ಸಂಜೆ 6.10 ರ ಸುಮಾರಿಗೆ ನಾಗಮಪಾಲ್ ಎಂಬ ಜನನಿಬಿಡ ರಸ್ತೆಯಲ್ಲಿ ವಾಹನ ಸಾಗುತ್ತಿದ್ದಾಗ ದುಷ್ಕರ್ಮಿಗಳು ಹಿಂಭಾಗದಿಂದ ಟ್ರಕ್‌ನೊಳಕ್ಕೆ ಗ್ರೆನೇಡ್ ಎಸೆದರು. 

ತಕ್ಷಣ ಜಾಗೃತರಾದ ಉಮೇಶ್ ಉಗ್ರರು ಎಸೆದ ಗ್ರೆನೇಡ್ ಎತ್ತಿಕೊಂಡು ಕಂಟೇನರ್ ಹೊರಗೆ ಜಿಗಿದರು. ಈ ವೇಳೆ ಗ್ರೆನೇಡ್ ಸ್ಫೋಟಗೊಂಡು ಉಮೇಶ್ ಸ್ಥಳದಲ್ಲೇ ಮೃತಪಟ್ಟರು. ಈ ಮೂಲಕ ಸಿಆರ್‌ಪಿಎಫ್ ವಾಹನದಲ್ಲಿದ್ದ ಇತರ ಯೋಧರ ಜೀವ ಕಾಪಾಡಿದರು ಎಂದು ಸಿಆರ್‌ಪಿಎಫ್ ತಿಳಿಸಿದೆ.  

click me!