ಡಿಕೆಶಿ ವಿರುದ್ಧವೀಗ ಬಂಡಾಯ

By Web DeskFirst Published Sep 12, 2018, 7:56 AM IST
Highlights

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ ಅವರಿಂದಾಗಿ ಜಿಲ್ಲೆಯಲ್ಲಿ ಪಕ್ಷದ ಇತರ ಶಾಸಕರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಅಲ್ಲಿನ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

ಬೆಂಗಳೂರು : ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಬೆಳಗಾವಿ ಕಾಂಗ್ರೆಸ್‌ ಶಾಸಕರ ನಂತರ ಇದೀಗ ಬಳ್ಳಾರಿಯ ಶಾಸಕರೂ ತಿರುಗಿಬಿದ್ದಿದ್ದಾರೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ ಅವರಿಂದಾಗಿ ಜಿಲ್ಲೆಯಲ್ಲಿ ಪಕ್ಷದ ಇತರ ಶಾಸಕರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಅಲ್ಲಿನ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಜಿಲ್ಲೆಯ ಕಾಂಗ್ರೆಸ್‌ ಶಾಸಕ ನಾಗೇಂದ್ರ ಮತ್ತಿತರರು ಸಚಿವ ಶಿವಕುಮಾರ್‌ ವಿರುದ್ಧ ಅಸಮಾಧಾನ ಹೊರಹಾಕಿದರು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಆನಂದ್‌ ಸಿಂಗ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವದಂತಿಯೂ ಹಬ್ಬಿದೆ.

ಶಿವಕುಮಾರ್‌ ಅವರು ಜಿಲ್ಲಾ ಉಸ್ತುವಾರಿ ಹೊತ್ತ ನಂತರ ನಮಗೆ ಜಿಲ್ಲೆಯಲ್ಲಿ ಉಸಿರಾಡಲು ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಶಿವಕುಮಾರ್‌ ಅವರು ಹೇಳಿದ ಮಾತು ಮಾತ್ರ ನಡೆಯುತ್ತದೆಯೇ ಹೊರತು ಬೇರೆಯವರ ಮಾತು ಅಲ್ಲ. ಜಿಲ್ಲೆಯಲ್ಲಿ ಆಡಳಿತಾರೂಢ ಪಕ್ಷದ ಶಾಸಕರಾದರೂ ನಮಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ನಮ್ಮ ಮಾತಿಗೆ ಬೆಲೆ ಇಲ್ಲ ಎಂದ ಮೇಲೆ ಪಕ್ಷದಲ್ಲಿ ಯಾಕಿರಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಹಲವು ದಿನಗಳಿಂದ ಸಚಿವ ರಮೇಶ್‌ ಜಾರತಿಹೊಳಿ ಮತ್ತು ಅವರ ಸಹೋದರ ಶಾಸಕ ಸತೀಶ್‌ ಜಾರಕಿಹೊಳಿ ಅವರು ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯುತ್ತಿದ್ದಾರೆ. ಬೆಳಗಾವಿ ರಾಜಕಾರಣ ಮತ್ತು ಜಿಲ್ಲಾಡಳಿತದಲ್ಲಿ ಶಿವಕುಮಾರ್‌ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಅದರ ಬೆನ್ನಲ್ಲೇ ಇದೀಗ ಬಳ್ಳಾರಿ ಕಾಂಗ್ರೆಸ್‌ ಶಾಸಕರು ಶಿವಕುಮಾರ್‌ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

click me!