ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಮುಂದಿನ ರಾಜಕೀಯ ನಡೆಯ ಬಗ್ಗೆ ನಿಗೂಢವಾಗಿ ಮಾತನಾಡಿದ್ದಾರೆ.
ಹಾವೇರಿ : ನನ್ನನ್ನು ಪಕ್ಷದಲ್ಲಿ ತುಳಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ರಾಜಕೀಯದಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಿ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಶಾಸಕನಾಗಿ ಒಬ್ಬನೇ ಇದ್ದು, ಸಚಿವ ಸ್ಥಾನ ನೀಡಿದರೆ ಮೇಲೆ ಬರುತ್ತೇನೆ ಎಂದು ಕೆಳಕ್ಕೆ ತಳ್ಳುವ ಯತ್ನ ನಡೆಯುತ್ತಿದೆ. ಕಾಂಗ್ರೆಸಿನವರೇ ಈ ರೀತಿ ಮಾಡುತ್ತಿದ್ದು, ಇದರಿಂದ ನನಗೆ ನೋವಾಗುತ್ತಿದೆ. ಎಲ್ಲೋ ಒಂದು ಕಡೆ ನನ್ನನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಕೂಡಿ ಹಾಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಬಗ್ಗೆ ಈಗಾಗಲೇ ಹಲವು ನಾಯಕರು ವಿವಿಧ ರೀತಿಯ ಹೇಳಿಕೆ ನೀಡುತ್ತಿದ್ದು, ಈ ಸಂಬಂಧ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ್, ಅವರು ಮುಖ್ಯಮಂತ್ರಿ ಆಗುತ್ತಾರೆ. ಅದು ಯಾವಾಗ ಎನ್ನುವುದನ್ನು ಕಾಲ ನಿರ್ಧರಿಸುತ್ತದೆ ಎಂದರು.
ಅಲ್ಲದೇ ವಿಶ್ವನಾಥ್ ಹೇಳಿಕೆ ಬಗ್ಗೆಯೂ ಮಾತನಾಡಿ, ಅವರು ಹಿರಿಯರು ಅವರು ಆ ರೀತಿಯ ಹೇಳಿಕೆ ನೀಡುವುದು ತಪ್ಪು. ಗಂಡಾ ಹೆಂಡತಿ ಸಂಸಾರ ಮಾಡುತ್ತಿರುವಾಗ ಸಂಸಾರದ ಗುಟ್ಟನ್ನ ಇನ್ನೊಬ್ಬರ ಮುಂದೆ ಹೇಳಬಾರದು, ಸದ್ಯ ಆ ಪರಿಸ್ಥಿತಿ ಇಲ್ಲ. ನಮ್ಮ ನಾಯಕರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಬೇಕು ಎಂದು ಹೇಳ್ತಿವಿ.ಅದರಲ್ಲಿ ತಪ್ಪೇನಿದೆ. ಅವರ ಹೇಳಿಕೆ ಕೇಳಿದರೆ ಬೇಜಾರಾಗುತ್ತದೆ. ಅಸಹ್ಯ ಅನಿಸುತ್ತದೆ ಎಂದರು.