500 ರು. ಮುಖಬೆಲೆಯ ಖೋಟಾನೋಟುಗಳೂ ಬೆಳಕಿಗೆ ಬಂದಿವೆ. ಹೀಗಾಗಿ ಸಾರ್ವಜನಿಕರು ತೀರಾ ಎಚ್ಚರಿಕೆಯಿಂದ ವ್ಯವಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ನವದೆಹಲಿ [ಅ.21]: ನಕಲು ಮಾಡುವುದು ಸುಲಭವಿಲ್ಲ ಎಂಬ ಒಕ್ಕಣೆಯೊಂದಿಗೆ ಅಪನಗದೀಕರಣದ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರತಂದಿದ್ದ 2000 ರು. ಮುಖಬೆಲೆಯ ಖೋಟಾನೋಟುಗಳು ಪತ್ತೆಯಾದ ಬಂದ ಬೆನ್ನಲ್ಲೇ 500 ರು. ಮುಖಬೆಲೆಯ ಖೋಟಾನೋಟುಗಳೂ ಬೆಳಕಿಗೆ ಬಂದಿವೆ. ಹೀಗಾಗಿ ಸಾರ್ವಜನಿಕರು ತೀರಾ ಎಚ್ಚರಿಕೆಯಿಂದ ವ್ಯವಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ದೆಹಲಿಯ ಮೆಟ್ರೋ ರೈಲು ನಿಲ್ದಾಣವೊಂದರಲ್ಲಿ 4.64 ಲಕ್ಷ ರು. ಮೌಲ್ಯದ 500 ರು. ಮುಖಬೆಲೆಯ ಖೋಟಾನೋಟುಗಳನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಶನಿವಾರ ಸಂಜೆ ಕಾಶ್ಮೀರಿ ಗೇಟ್ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪತ್ತೆಯಾಗಿತ್ತು. ರಾತ್ರಿ ಪಾಳೆಯ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮೆಟ್ರೋ ನಿಲ್ದಾಣದ ಬಳಿ ಈ ಬ್ಯಾಗ್ ಕಂಡು ಬಂದಿತ್ತು. ಪರಿಶೀಲನೆ ನಡೆಸಿದಾಗ ಅದರೊಳಗೆ 500 ರು. ಮುಖಬೆಲೆಯ 4.64 ಲಕ್ಷ ಮೌಲ್ಯದ ಖೋಟಾನೋಟುಗಳು ಸಿಕ್ಕಿವೆ. ಇದನ್ನು ದೆಹಲಿ ಮೆಟ್ರೋ ರೈಲು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
undefined
2000 ರು.ನ ಖೋಟಾನೋಟು ಸಿಕ್ಕಿದ್ದವು:
ಖೋಟಾನೋಟು ಸಾಗಣೆಗೆ ಕಡಿವಾಣ ಹಾಕಲೆಂದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಳೆ ನೋಟುಗಳನ್ನು ಅಪನಗದೀಕರಣಗೊಳಿಸಿತ್ತು. ಅಲ್ಲದೇ, ದೇಶ-ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಒಳ ಬರುತ್ತಿದ್ದ ಖೋಟಾನೋಟು ತಡೆಗೆ ಅತ್ಯುತ್ಕೃಷ್ಟಪ್ರಮಾಣದ 2000 ಹಾಗೂ 500 ರು. ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಗಿತ್ತು. ಇವನ್ನು ನಕಲು ಮಾಡಲು ಅಸಾಧ್ಯ ತಂತ್ರಜ್ಞರು ತಿಳಿಸಿದ್ದರು. ಆದರೆ, ಉತ್ತರಪ್ರದೇಶದ ಆಗ್ರಾದಲ್ಲಿ 48 ಸಾವಿರ ಮೌಲ್ಯದ 2 ಸಾವಿರ ರು. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದವು.
ಕಳೆದ ಜೂನ್‌ನಲ್ಲಿ ದೆಹಲಿ ಪೊಲೀಸರು ಕೂಡ 2 ಸಾವಿರ ರು. ಮುಖಬೆಲೆಯ ಖೋಟಾನೋಟುಗಳನ್ನು ಚಲಾವಣೆ ತರುತ್ತಿದ್ದ ಜಾಲವೊಂದನ್ನು ಭೇದಿಸಿತ್ತು. ಪಾಕಿಸ್ತಾನದ ಕೃಪಾಶೀರ್ವಾದದೊಂದಿಗೆ ನೇಪಾಳ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಜಾಲ ಅದಾಗಿತ್ತು.
2000 ರು. ನೋಟುಗಳಲ್ಲಿ ಆಪ್ಟಿಕಲ್ ವೇರಿಯಬಲ್ ಇಂಕ್ ಅನ್ನು ಬಳಸಲಾಗುತ್ತದೆ. ಇದೊಂದು ಉತ್ಕೃಷ್ಟದರ್ಜೆಯ ವಿಶೇಷ ಇಂಕ್ ಆಗಿದ್ದು, ಬಣ್ಣ ಬದಲಾವಣೆಯನ್ನು ತೋರುತ್ತದೆ. ಅದನ್ನೇ ಬಳಸಿ ಖೋಟಾನೋಟು ದಂಧೆಕೋರರು ನಕಲು ನೋಟು ಸೃಷ್ಟಿಸಿದ್ದರು.