
ಬೆಂಗಳೂರು : ಮಾಜಿ ಉಪರಾಷ್ಟ್ರಪತಿ ದಿವಂಗತ ಬಿ.ಡಿ.ಜತ್ತಿ ಅವರ ಕುಟುಂಬಕ್ಕೆ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಹಾಗೂ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಕಿರುಕುಳ ನೀಡಿ, ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಯಾವುದೇ ‘ಪುರಾವೆ’ಗಳಿಲ್ಲ ಎಂದು ಡಿಸಿಪಿ ಅಬ್ದುಲ್ ಅಹದ್ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ವೈಟ್‌ಫೀಲ್ಡ್ ನಿವಾಸಿ ಬಿ.ಡಿ.ಜತ್ತಿ ಅವರ ಪುತ್ರ ದಾನಪ್ಪ ಬಸಪ್ಪ ಜತ್ತಿ (74) ಅವರ ಪತ್ನಿ ಲಕ್ಷ್ಮೀ ಜತ್ತಿ ಅವರು ತಮ್ಮ ವಿರುದ್ಧ ದಾಖಲಿಸಿರುವ ದೂರುಗಳನ್ನು ಕೈ ಬಿಡಲು ಎಸಿಪಿ ಸುಧಾಮನಾಯಕ್ ಹಾಗೂ ವೈಟ್‌ಫೀಲ್ಡ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸೋಮಶೇಖರ್ ಲಂಚ ಪಡೆದಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಲಂಚ ದೂರು ಆರೋಪ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಂಗಳದವರೆಗೆ ತಲುಪಿ, ಮುಖ್ಯಮಂತ್ರಿಗಳು ಸೂಕ್ತ ತನಿಖೆ ನಡೆಸುವಂತೆ ಆಯುಕ್ತರಿಗೆ ಸೂಚಿಸಿದ್ದರು.
ಆಯುಕ್ತರ ಸೂಚನೆಗೆ ಮೇರೆಗೆ ತನಿಖೆ ನಡೆಸಿರುವ ಡಿಸಿಪಿ ಅಬ್ದುಲ್ ಅಹದ್ ಅವರು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಸಿಂಗ್ ಅವರಿಗೆ ಪ್ರಕರಣದ ವರದಿ ಸಲ್ಲಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಡಿ.ಬಿ.ಜತ್ತಿ ಅವರಿಗೆ ಸೇರಿದ 24 ವಿಲ್ಲಾಗಳಿವೆ. ಈ ಪೈಕಿ 14 ವಿಲ್ಲಾಗಳನ್ನು ಜತ್ತಿ ಅವರು ಇತರರಿಗೆ ಮಾರಾಟ ಮಾಡಲಾಗಿದೆ. ವಿಲ್ಲಾದ ನಿರ್ವಹಣೆಗೆ ಸಂಬಂಧಿಸಿದಂತೆ ಜಗಳ ನಡೆದು ಜತ್ತಿ ಕುಟುಂಬದ ವಿರುದ್ಧ ವಿಲ್ಲಾಸದ ನಿವಾಸಿಯೊಬ್ಬರು 2017ರ ಸೆಪ್ಟೆಂಬರ್ ತಿಂಗಳಿನಲ್ಲಿ ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ್ದ ಸಬ್‌ಇನ್ಸ್‌ಪೆಕ್ಟರ್ ಸೋಮಶೇಖರ್, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಆದರೆ ‘ಬಿ’ ರಿಫೋರ್ಟ್ ಸಲ್ಲಿಸಲು .2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ವಕೀಲ ಜೋಶಿ ಎಂಬುವರ ಮೂಲಕ ಸಬ್‌ಇನ್ಸ್‌ಪೆಕ್ಟರ್ ಅವರಿಗೆ ನೀಡಿರುವುದಾಗಿ ಲಕ್ಷ್ಮೇ ಡಿ.ಜತ್ತಿ ಅವರು ಆರೋಪಿಸಿದ್ದರು. ತಮ್ಮ ಮೂಲಕ ಹಣ ನೀಡಿಲ್ಲ ಎಂದು ಜೋಶಿ ಹೇಳಿಕೆ ದಾಖಲಿಸಿದ್ದಾರೆ. ಮಹಿಳೆ ಬಳಿ ಇತರೆ ಯಾವುದೇ ಆಡಿಯೋ ಸಂಭಾಷಣೆ ದಾಖಲೆಗಳನ್ನು ಕೇಳಿದ್ದೆವು. ಆದರೆ ಯಾವುದೇ ದಾಖಲೆಗಳು ಅವರ ಬಳಿ ಇಲ್ಲ. ಆರೋಪಕ್ಕೆ ಮುನ್ನವೇ ಪ್ರಕರಣದಲ್ಲಿ ಚಾಜ್‌ರ್‍ಶೀಟ್ ಕೂಡ ಸಲ್ಲಿಸಲಾಗಿದೆ ಎಂದು ಡಿಸಿಪಿ ಅವರು ತನಿಖಾ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಎಸಿಪಿ ಕರ್ತವ್ಯಲೋಪ?
ದಾನಪ್ಪ ಬಸಪ್ಪ ಜತ್ತಿ ಕುಟುಂಬದ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದ ಬಗ್ಗೆ ಖುದ್ದು ಎಸಿಪಿ ಸುಧಾಮನಾಯಕ್ ಅವರು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಸಿಪಿ ಅವರು ಪ್ರಕರಣ ದಾಖಲಾಗುತ್ತಿದ್ದಂತೆ ಲಕ್ಷ್ಮೇ ಡಿ.ಜತ್ತಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಂಧನವಾಗಬೇಕಿದ್ದ ಆರೋಪಿಗೆ ಕರೆ ಮಾಡಿ ಎಚ್ಚರಿಸುವ ಮೂಲಕ ಎಸಿಪಿ ಕರ್ತವ್ಯಲೋಪದ ಆರೋಪಕ್ಕೆ ಗುರಿಯಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಉನ್ನತ ಅಧಿಕಾರಿ ಮಾಹಿತಿ ನೀಡಿದರು. ಇನ್ನು ಎಸಿಪಿ ವಿರುದ್ಧದ ಲಂಚ ಆರೋಪಕ್ಕೆ ಸಾಕ್ಷ್ಯಗಳು ಇಲ್ಲ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ.
ತಡರಾತ್ರಿ ಕರೆ ಮಾಡಿದ್ದಕ್ಕೆ ಎಚ್ಚರಿಕೆ ನೀಡಿ!
ಕಳೆದ ಜೂನ್ ತಿಂಗಳಿಂದ ಒಂದು ವರ್ಷದಲ್ಲಿ ಸುಮಾರು 27 ಬಾರಿ ಎಸಿಪಿ ಸುಧಾಮನಾಯಕ್ ಅವರು ತನ್ನ ಮೊಬೈಲ್‌ಗೆ ಕರೆ ಮಾಡಿದ್ದು, ನಾನು ಆರೇಳು ಬಾರಿ ಕರೆ ಮಾಡಿದ್ದೇನೆ ಎಂದು ಲಕ್ಷ್ಮೇ ಡಿ.ಜತ್ತಿ ಅವರು ಹೇಳಿದ್ದರು. ಆದರೆ ರಾತ್ರಿ 10 ಗಂಟೆ ಮೀರಿ ಒಂದು ಬಾರಿ ಎಸಿಪಿ ಮಹಿಳೆಗೆ ಕರೆ ಮಾಡಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಉಳಿದಂತೆ ಇಬ್ಬರ ನಡುವಿನ ಸಂಭಾಷಣೆ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಮಹಿಳೆಗೆ ರಾತ್ರಿ 10 ಗಂಟೆ ನಂತರ ಕರೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎಸಿಪಿಗೆ ಎಚ್ಚರಿಕೆ ನೀಡುವಂತೆ ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟುಹಣಕ್ಕೆ ಬೇಡಿಕೆ ಆರೋಪ
ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಪುತ್ರ ದಾನಪ್ಪ ಬಸಪ್ಪ ಜತ್ತಿ ಅವರು ವೈಟ್‌ಫೀಲ್ಡ್‌ನಲ್ಲಿ ವಿಲ್ಲಾದಲ್ಲಿ ನೆಲೆಸಿದ್ದಾರೆ. ವಿಲ್ಲಾದ ಆಡಳಿತ ನಿರ್ವಹಣೆಗೆ ಸಂಬಂಧಪಟ್ಟಂತೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೇ ವಿಚಾರಕ್ಕೆ ಮಾಜಿ ಉಪರಾಷ್ಟ್ರಪತಿ ಮತ್ತು ವಿಲ್ಲಾದ ನಿವಾಸಿಗಳ ನಡುವೆ ಜತ್ತಿ ಅವರ ಕುಟುಂಬದ ವಿರುದ್ಧ ದೂರು ದಾಖಲಿಸಲಾಗಿತ್ತು. ಎಸ್‌ಡಿಪಿಯಲ್ಲಿ ಬಿದ್ದು ಕಾರ್ಮಿಕ ಮೃತಪಟ್ಟಪ್ರಕರಣದಲ್ಲಿ ಲಕ್ಷ್ಮೇ ಡಿ.ಜತ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅಲ್ಲದೆ, ಮಾಜಿ ಪಾಲಿಕೆ ಸದಸ್ಯರೊಬ್ಬರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಎಲ್ಲಾ ಪ್ರಕರಣಗಳನ್ನು ಕೈ ಬಿಡಲು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಿದರೂ ಇನ್ನಷ್ಟುಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಲಕ್ಷ್ಮೇ ಆರೋಪಿಸಿದ್ದರು.
ಎಸಿಪಿ ವಿರುದ್ಧದ ಆರೋಪದ ಕುರಿತು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ತನಿಖೆ ನಡೆಸಿರುವ ವರದಿ ಕೈ ಸೇರಿದೆ. ವರದಿ ಆಧಾರಿಸಿ ಮುಂದಿನ ಕ್ರಮಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿ ಕೊಡಲಾಗುವುದು.
-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ
ವರದಿ : ಎನ್.ಲಕ್ಷ್ಮಣ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.