
ಬೆಂಗಳೂರು (ಏ. 09): ಲೋಕಸಭಾ ಚುನಾವಣೆ ಬಳಿಕ ಬಿಬಿಎಂಪಿಯ 198 ವಾಡ್ ಗರ್ಳನ್ನು ಜನಸಂಖ್ಯೆಗೆ ಅನುಗುಣವಾಗಿ ಪುನಾರಚನೆ ಕಾರ್ಯಕ್ಕೆ ಚಾಲನೆಗೆ ಸಿಗಲಿದೆ.
2006 ರಲ್ಲಿ 240 ಚದರ ಕಿ.ಮೀ. ವಿಸ್ತೀರ್ಣದ ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಪಿ) ಅನ್ನು 800 ಚದರ ಕಿ.ಮೀ. ವಿಸ್ತರಣೆ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚನೆ ಮಾಡಲಾಯಿತು. ಆ ಸಂದರ್ಭದಲ್ಲಿ ರಚಿಸಲಾದ ವಾರ್ಡ್‌ಗಳು ಜನಸಂಖ್ಯೆ ಆಧಾರದಲ್ಲಿ ಅಸಮತೋಲನ ಹೊಂದಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಕೆಲ ವಾರ್ಡ್‌ಗಳ ವ್ಯಾಪ್ತಿ ಚಿಕ್ಕದಿದ್ದರೂ ಜನಸಂಖ್ಯೆ ಹೆಚ್ಚಿದೆ. ಇನ್ನು ಕೆಲವೆಡೆ ವಾರ್ಡ್ ವ್ಯಾಪ್ತಿ ದೊಡ್ಡದಿದ್ದರೂ ಜನಸಂಖ್ಯೆ ಕಡಿಮೆಯಿದೆ. 198 ವಾರ್ಡ್‌ಗಳಲ್ಲೂ ಏಕರೂಪ ಅಭಿವೃದ್ಧಿ ಮತ್ತು ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆ ಜನಸಂಖ್ಯೆಗೆ ಆಧಾರದಲ್ಲಿ ವಾರ್ಡ್‌ಗಳ ಪುನಾರಚನೆ ಮಾಡಲು ನಿರ್ಧರಿಸಿದೆ.
ಬಿಬಿಎಂಪಿ ಪುನಾರಚನೆ ಸಂಬಂಧ ರಾಜ್ಯ ಸರ್ಕಾರ ನೇಮಿಸಿದ್ದ ಬಿ.ಎಸ್.ಪಾಟೀಲ್ ಸಮಿತಿ ನೀಡಿದ್ದ ಅಂತಿಮ ವರದಿಯಲ್ಲೂ ವಾರ್ಡ್ ಪುನಾರಚನೆ ಕುರಿತು ಪ್ರಸ್ತಾಪಿಸಲಾಗಿತ್ತು. ಅದನ್ನೂ ಕೂಡ ಪರಿಗಣಿಸಿರುವ ನಗರಾಭಿವೃದ್ಧಿ ಇಲಾಖೆ ವಾರ್ಡ್ ಪುನಾರಚನೆಗೆ ಮುಂದಾಗಿದೆ. ಅಧ್ಯಯನ ವರದಿ ನೀಡುವಂತೆ ರಾಜ್ಯ ಸರ್ಕಾರ ಬಿ.ಎಸ್.ಪಾಟೀಲ್ ಸಮಿತಿಗೆ ಈಗಾಗಲೆ ಸೂಚಿಸಿದೆ.
ಸರಣಿ ಸಭೆ: ವಾರ್ಡ್‌ಗಳ ಪುನಾರಚನೆ ಕುರಿತಂತೆ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಈಗಾಗಲೆ ಮುರ್ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಸಭೆಯಲ್ಲಿ ಯಾವೆಲ್ಲ ವಾರ್ಡ್‌ಗಳ ವಿಸ್ತೀರ್ಣ ಕಡಿಮೆಯಿದ್ದು, ಜನಸಂಖ್ಯೆ ಹೆಚ್ಚಿದೆ, ವಾರ್ಡ್‌ಗಳಲ್ಲಿನ ಅಭಿವೃದ್ಧಿಯಲ್ಲಾಗಿರುವ ಏರುಪೇರುಗಳ ಬಗ್ಗೆ ಚರ್ಚಿಸಲಾಗಿದೆ.
ಈ ಕುರಿತಂತೆ ಇನ್ನೂ ಎರಡ್ಮೂರು ಸಭೆ ನಡೆಯಲಿದ್ದು, ಅದಾದ ನಂತರ ನಗರಾಭಿವೃದ್ಧಿ ಇಲಾಖೆ ವಾರ್ಡ್ ಪುನಾರಚನೆ ಸಂಬಂಧ ಅಂತಿಮ ಆದೇಶ ಹೊರಡಿಸುವ ಸಾಧ್ಯತೆಗಳಿವೆ.
ಕಾರ್ಯರೂಪಕ್ಕೆ ಬಾರದ ವಲಯ ಪುನಾರಚನೆ: ವಾರ್ಡ್ ಪುನಾರಚನೆ ಮಾದರಿಯಲ್ಲಿ ಬಿಬಿಎಂಪಿ ವಲಯಗಳಲ್ಲಿನ ವಲಯ ಅಸಮಾನತೆ ತಡೆಯುವ ಉದ್ದೇಶದಿಂದಾಗಿ 2016 ರಲ್ಲಿ ಈಗಾಗಲೆ 8 ವಲಯಗಳನ್ನು 10 ವಲಯಗಳನ್ನಾಗಿ ಮರುವಿಂಗಡಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಈವರೆಗೂ 10 ವಲಯಗಳು ಆಡಳಿತಾತ್ಮಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಬಿಬಿಎಂಪಿ ಅಧಿಕಾರಿಗಳು ಮಾತ್ರ ಕಟ್ಟಡ ಸಿಬ್ಬಂದಿ ನಿಯೋಜನೆ ಕಾರ್ಯ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.