
ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಗೆ ಕೆಟ್ಟ ಹೆಸರು ತರಲು ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಲುವಾಗಿ ಆಹಾರದ ಪೂರೈಕೆಯಲ್ಲಿ ವ್ಯತ್ಯಯ ಮಾಡುವ ಸಾಧ್ಯತೆ ಇದೆ. ಎಲ್ಲಾ ಕ್ಯಾಂಟೀನ್, ಅಡುಗೆ ಮನೆಗಳಲ್ಲಿ ರಾತ್ರಿ ವೇಳೆಯೂ ಚಿತ್ರೀಕರಣವಾಗುವಂತಹ ಸಿಸಿಟೀವಿ ಕ್ಯಾಮೆರಾ ಅಳವಡಿಕೆ ಮಾಡಿ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಡುಗೆ ಮನೆಗಳಿಂದ ಕ್ಯಾಂಟೀನ್‌ಗಳಿಗೆ ಸರಬರಾಜು ಮಾಡುವ ಸಂದರ್ಭದಲ್ಲಿ ವಾಹನ ಚಾಲಕರು ಮತ್ತು ಕಿಡಿಗೇಡಿಗಳು ಏನನ್ನಾದರೂ ಬೆರೆಸುವ ಸಾಧ್ಯತೆಯಿರಬಹುದು. ಹೀಗಾಗಿ
ಪ್ರತಿಯೊಂದು ವಾಹನವೂ ನಿಗದಿಪಡಿಸಿ ಮಾರ್ಗದಲ್ಲಿಯೇ ಚಲಿಸಬೇಕು. ಇದರ ಪರಿಶೀಲನೆಗಾಗಿ ಪ್ರತಿಯೊಂದು ವಾಹನಕ್ಕೂ ಜಿಪಿಎಸ್ ಅಳವಡಿಸಬೇಕು ಎಂದು ಸೂಚಿಸಿದ್ದಾರೆ.
ಸಿಬ್ಬಂದಿಯ ಪೂರ್ವಾಪರ ಕಡ್ಡಾಯ: ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಮನೆಗಳಲ್ಲಿ ಕೆಲಸ ಮಾಡುವಂತಹ ಎಲ್ಲಾ ಸಿಬ್ಬಂದಿ ಹಾಗೂ ವಾಹನ ಚಾಲಕರಿಂದ ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕು ಮತ್ತು ಅವರ ಬಗ್ಗೆ ಪೊಲೀಸ್ ಠಾಣೆಯಿಂದ ಪೂರ್ವಾಪರ ದಾಖಲೆಗಳನ್ನು ಪಡೆದುಕೊಳ್ಳಬೇಕು. ಪಾಸ್ ಪೋರ್ರ್ಟ್ ಪಡೆಯುವ ವೇಳೆಗೆ ಮಾಡುವಂತೆ ಪೂರ್ವಾಪರ ತನಿಖೆ ನಡೆಸಬೇಕು. ಸಿಬ್ಬಂದಿಗೆ ಏಕ ರೀತಿ ಸಮವಸ್ತ್ರ, ಗುರುತಿನ ಚೀಟಿ ಧರಿಸಿರಬೇಕು.
ಬಡವರು ಹಾಗೂ ಶ್ರಮಿಕ ವರ್ಗದವರಿಗೆ ಕಡಿಮೆ ದರದಲ್ಲಿ ಊಟ-ಉಪಾಹಾರ ನೀಡಲು ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ವೃದ್ಧರು
ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾಲು ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಮೂಲಕ ಆಟೋ, ಕ್ಯಾಬ್ ಚಾಲಕರು ಹಾಗೂ ಪಾರ್ಸೆಲ್ ವ್ಯಾನ್ ಸಿಬ್ಬಂದಿ, ಡೆಲಿವರಿ ಕೆಲಸದ ಹುಡುಗರಿಗೆ ಇಂದಿರಾ ಕ್ಯಾಂಟೀನ್ ಬಳಿ ವಾಹನ ನಿಲ್ಲಿಸಿ ಊಟ-ತಿಂಡಿ ಮಾಡಲು ಅನುವು ಮಾಡಿಕೊಡುವಂತೆ ಆಯುಕ್ತರು ಆಂತರಿಕ ಸುತ್ತೋಲೆಯಲ್ಲಿ ಎಲ್ಲ ಜಂಟಿ ಆಯುಕ್ತರಿಗೆ ಸೂಚನೆ
ನೀಡಿದ್ದಾರೆ.
ಬಹುತೇಕ ಕ್ಯಾಂಟೀನ್‌ಗಳ ಮುಂದೆ ವಾಹನ ನಿಲುಗಡೆಗೆ ಅವಕಾಶವಿಲ್ಲ. ಇದರಿಂದ ರಸ್ತೆ ಸಂಚಾರ ದಟ್ಟಣೆ ಉಂಟಾಗದಂತೆ ಅವರಿಗೆ ಕನಿಷ್ಠ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ಗಳಿಗೆ ಬರುವ ಮಹಿಳೆಯರು, ವೃದ್ಧರು ಹಾಗೂ ಅಶಕ್ತರಿಗಾಗಿ ಪ್ರತ್ಯೇಕ ಸಾಲು ವ್ಯವಸ್ಥೆ ಮಾಡಿ ಊಟ ನೀಡಬೇಕು. ಮುಂಜಾಗ್ರತಾ ಕ್ರಮವಾಗಿ ಪ್ರಥಮ ಚಿಕಿತ್ಸಾ
ಪೆಟ್ಟಿಗೆ, ಹತ್ತಿರದ ಆಸ್ಪತ್ರೆಯ ದೂರವಾಣಿ ಸಂಖ್ಯೆ ಮತ್ತು ಅಗ್ನಿ ನಿರೋಧಕ ಸಾಧನ ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್ಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.