27ಕ್ಕೆ ಅಲ್ಲ, ಅ. 1ಕ್ಕೆ ಮೇಯರ್ ಚುನಾವಣೆ..!

By Kannadaprabha News  |  First Published Sep 24, 2019, 11:22 AM IST

ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಸೆ.27ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿ ಬೆಂಗಳೂರು ವಿಭಾಗದ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತ ಮರು ಅಧಿಸೂಚನೆ ಹೊರಡಿಸಿದ್ದಾರೆ. ಸ್ಥಾಯಿ ಸಮಿತಿ ಚುನಾವಣೆಗೆ ಏಳು ದಿನ ಮೊದಲೇ ಅಧಿಸೂಚನೆ ಹೊರಡಿಸಬೇಕಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿ, ಅ.1ರ ಬೆಳಗ್ಗೆ 11.30ಕ್ಕೆ ಮರು ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.


ಬೆಂಗಳೂರು(ಸೆ.24): ಪ್ರಸಕ್ತ ಸಾಲಿನ ಕೊನೆಯ ಅವಧಿಗೆ ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಸೆ.27ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿ ಬೆಂಗಳೂರು
ವಿಭಾಗದ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತ ಮರು ಅಧಿಸೂಚನೆ ಹೊರಡಿಸಿದ್ದಾರೆ.

ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರ ಅವಧಿ ಸೆ.28ಕ್ಕೆ  ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತ ಅವರು ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ದಿನಾಂಕವನ್ನು ಸೆ.27ಕ್ಕೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದರು.

Latest Videos

undefined

ಅ.01 ರಂದು ಚುನಾವಣೆಗೆ ಮುಹೂರ್ತ ಫಿಕ್ಸ್:

ಆದರೆ, ಸ್ಥಾಯಿ ಸಮಿತಿ ಚುನಾವಣೆಯನ್ನು ಮೇಯರ್ ಚುನಾವಣೆ ಜೊತೆ ನಡೆಸಬೇಕೋ ಅಥವಾ ಸಮಿತಿಗಳ ಅವಧಿ ಮುಗಿದ ನಂತರವೇ ನಡೆಸಬೇಕೋ ಎಂಬ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿತ್ತು. ಕಾನೂನು ತಜ್ಞರು ಮೇಯರ್ ಚುನಾವಣೆ ಜತೆಗೆ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸುವುದು ಸೂಕ್ತ  ಎಂದು ಸಲಹೆ ನೀಡಿತು. ಹೀಗಾಗಿ ಮೇಯರ್ ಚುನಾವಣೆ ಜತೆಗೆ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು. ಸ್ಥಾಯಿ ಸಮಿತಿ ಚುನಾವಣೆಗೆ ಏಳು ದಿನ ಮೊದಲೇ ಅಧಿಸೂಚನೆ ಹೊರಡಿಸಬೇಕಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿ, ಅ.1ರ ಬೆಳಗ್ಗೆ 11.30ಕ್ಕೆ ಮರು ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ ಮತ್ತು ಅಂದೇ ಸ್ಥಾಯಿ ಸಮಿತಿ ಚುನಾವಣೆಗಳಿಗೂ ಮಹೂರ್ತ ನಿಗದಿಪಡಿಸಲಾಗಿದೆ.

ಬಿಬಿಎಂಪಿಯಲ್ಲಿನ್ನು 8 ವಲಯ : ಅಧಿಕಾರ ವಿಕೇಂದ್ರಿಕರಣ ಅಂತಿಮ

ಹಿನ್ನೆಲೆ:

ಮೇಯರ್ ಹಾಗೂ ಉಪ ಮೇಯರ್ ಅವಧಿ ಮುಗಿದಿದ್ದರೂ ಸ್ಥಾಯಿ ಸಮಿತಿ ಸದಸ್ಯರ ಅವಧಿ ಇನ್ನೂ ಮೂರು ತಿಂಗಳು ಇದೆ. ಆದರೆ, ಬಿಬಿಎಂಪಿಯ ವಿರೋಧ ಪಕ್ಷ ನಾಯಕ ಪದ್ಮನಾಭ ರೆಡ್ಡಿ ಮೇಯರ್ ಚುನಾವಣೆ ಸಂದರ್ಭದಲ್ಲೇ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಹಾಗೂ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಪ್ರತಿಯಾಗಿ ಬಿಬಿಎಂಪಿ ಆಡಳಿತದ ಮುಖಂಡ ಅಬ್ದುಲ್ ವಾಜೀದ್, ಸ್ಥಾಯಿ ಸಮಿತಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಳ್ಳುವುದಕ್ಕೆ ಇನ್ನೂ ಮೂರು ತಿಂಗಳು ಸಮಯವಿದೆ. ಈ ಅವಧಿ ಮುಕ್ತಾಯವಾದ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಗೆ ಹಾಗೂ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ವಾದಿಸಿದ್ದರು. ಈ ಗೊಂದಲ ನಿವಾರಣೆಗೆ ನಗರಾಭಿವೃದ್ಧಿ ಇಲಾಖೆ ಕಾನೂನು ತಜ್ಞರ ಅಭಿಪ್ರಾಯ ಕೋರಿತ್ತು.

ಏನಿದು ವಿವಾದ?
* ಮೇಯರ್, ಉಪಮೇಯರ್ ಅಧಿಕಾರಾವಧಿ ಇದೇ ಸೆ.28ಕ್ಕೆ ಮುಕ್ತಾಯ
* ಕಾನೂನು ಅಭಿಪ್ರಾಯ ಪಡೆದು ದಿನಾಂಕ ನಿಗದಿ ಪಡಿಸಿದ ಹರ್ಷಗುಪ್ತ
* ಸ್ಥಾಯಿ ಸಮಿತಿ ಅಧಿಕಾರಾವಧಿ ಮುಕ್ತಾಯಕ್ಕೆ ಮೂರು ತಿಂಗಳು ಬಾಕಿ
* ಒಟ್ಟಿಗೇ ಚುನಾವಣೆ ನಡೆಸುವಂತೆ ಪತ್ರ ಬರೆದಿದ್ದ ಪದ್ಮನಾಭ ರೆಡ್ಡಿ
* ಡಿಸೆಂಬರ್‌ಗೇ ಸ್ಥಾಯಿ ಸಮಿತಿ ಚುನಾವಣೆ ನಡೆಸುವಂತೆ ವಾಜೀದ್ ಮನವಿ

ನಾಲ್ಕು  ಕ್ಷೇತ್ರಕ್ಕೆ ನೀತಿ ಸಂಹಿತೆ ಮಿತಿಗೊಳಿಸಿ: ವಾಜೀದ್ ಮನವಿ

ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಇಡೀ ನಗರಕ್ಕೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಇದರಿಂದ ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಚಣೆ ಉಂಟಾಗುತ್ತಿದೆ. ಈ ಹಿಂದೆ ೨೦೧೮ರಲ್ಲಿ ಜೈಪುರ ನಗರದಲ್ಲಿ ಉಪಚುನಾವಣೆ ಸಂದರ್ಭದಲ್ಲಿ ಉಪಚುನಾವಣೆ ಕ್ಷೇತ್ರಗಳಿಗೆ ಮಾತ್ರ ನೀತಿ ಸಂಹಿತೆ ಜಾರಿ ಮಾಡಲಾಗಿತ್ತು. ಅದೇ ರೀತಿ ಬೆಂಗಳೂರು ನಗರದ ಉಪಚುನಾವಣೆ ನಡೆಯುವ ನಾಲ್ಕು ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಉಳಿದ ಕಡೆ ಚುನಾವಣೆ ಮಾದರಿ ನೀತಿ ಸಂಹಿತೆ ವಿನಾಯಿತಿಗೆ ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ.

ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ: 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಪಟ್ಟ ಆಡಳಿತಾರೂಢ ಬಿಜೆಪಿಗೆ ಒಲಿಯುವ ಸಾಧ್ಯತೆ ಹೆಚ್ಚಿರುವ ಕಾರಣ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಲು ಪಕ್ಷದ ಹಿರಿಯ ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.

ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕರಾದ ರವಿ ಸುಬ್ರಹ್ಮಣ್ಯ, ಎಸ್.ಆರ್.ವಿಶ್ವನಾಥ್ ಮತ್ತು ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಸ್.ಮುನಿರಾಜು ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿ ಮಂಗಳವಾರವೇ ಸಭೆ ನಡೆಸಿ, ಪಕ್ಷದ ವಿವಿಧ ಮುಖಂಡರು, ಹಿರಿಯ ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ. ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಎರಡು ದಿನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮಿತಿಯು ವರದಿ ನೀಡಲಿದೆ. ಯಾರು ಮೇಯರ್ ಸ್ಥಾನಕ್ಕೆ ಸೂಕ್ತ ಎಂಬುದರ ಬಗ್ಗೆ ಸಮಿತಿಯು ವರದಿಯಲ್ಲಿ ಪ್ರಸ್ತಾಪಿಸಲಿದೆ.

27ಕ್ಕೆ ಚುನಾವಣೆ ನಿಗದಿ ? ಬಿಜೆಪಿಗೆ ಅಧಿಕಾರ ಸಾಧ್ಯತೆ?

ಮೇಯರ್ ಹುದ್ದೆಗೆ ಬಿಜೆಪಿಯ ಹಲವು ಸದಸ್ಯರು ಲಾಬಿ ನಡೆಸುತ್ತಿದ್ದಾರೆ. ಬಿಬಿಎಂಪಿಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಿ ದ್ದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಮೇಯರ್ ಸ್ಥಾನ ಕೈ ತಪ್ಪಿತ್ತು. ಆದರೆ, ಈ ಬಾರಿ ಮೇಯರ್ ಪಟ್ಟಕ್ಕಾಗಿ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪಾಲಿಕೆ ಗದ್ದುಗೆ ಬಿಜೆಪಿ ಪಾಲಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಮುಖಂಡರು ವಿಸ್ತೃತವಾಗಿ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ತೀವ್ರ ಲಾಬಿ:

ಮೇಯರ್ ಆಕಾಂಕ್ಷಿ ಪಟ್ಟಿಯಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಪಾಲಿಕೆ ಸದಸ್ಯರಾದ ಮಂಜುನಾಥ್ ರಾಜ್, ಎಲ್.ಶ್ರೀನಿವಾಸ್, ಗೌತಮ್, ಉಮೇಶ್ ಶೆಟ್ಟಿ, ಮುನೀಂದ್ರ ಕುಮಾರ್ ಇದ್ದಾರೆ.
ಇವರ ಪೈಕಿ ಯಾರಿಗೆ ಮೇಯರ್ ಸ್ಥಾನ ಒಲಿದು ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ನಡುವೆ, ಸಭೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಮೇಯರ್ ಸ್ಥಾನ ಲಭಿಸುವಂತೆ ಲಾಭಿ ನಡೆಸಲಾಯಿತು. ಕಂದಾಯ ಸಚಿವ ಆರ್.ಅಶೋಕ್ ಅವರು ಎಲ್. ಶ್ರೀನಿವಾಸ್ ಪರ ನಿಂತರೆ, ಉಪಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥ ನಾರಾಯಣ್ ಅವರು ಮಂಜುನಾಥ್ ರಾಜ್‌ಗೆ ಬೆಂಬಲ ಸೂಚಿಸಿದರು ಎಂದು
ಹೇಳಲಾಗಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಐಟಿ ಬಂಧನಕ್ಕೊಳಗಾಗಿದ್ದು, ಈ ವಿಚಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಅಸಮಾಧಾನವಾಗಿದೆ. ಅಲ್ಲದೇ, ಬಿಜೆಪಿ ಸರ್ಕಾರವು ಒಕ್ಕಲಿಗ ಸಮುದಾಯವನ್ನು
ಕಡೆಗಣಿಸಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ. 14 ವರ್ಷಗಳಿಂದ ಒಕ್ಕಲಿಗ ಸಮುದಾಯಕ್ಕೆ ಮೇಯರ್ ಪಟ್ಟ ಲಭಿಸಿಲ್ಲ. ಇಂತಹ ಆರೋಪಗಳಿಂದ ದೂರವಾಗಲು ಮೇಯರ್ ಸ್ಥಾನವು ಒಕ್ಕಲಿಗ
ಸಮುದಾಯಕ್ಕೆ ನೀಡಬೇಕು ಎಂಬ ಒತ್ತಾಯಗಳು ಸಭೆಯಲ್ಲಿ ಕೇಳಿ ಬಂದಿವೆ ಎನ್ನಲಾಗಿದೆ.

ಮೇಯರ್ ಸ್ಥಾನಕ್ಕೆ  ಕಾಂಗ್ರೆಸ್ ಸ್ಪರ್ಧೆ ಖಚಿತ:

ಬಿಬಿಎಂಪಿ ಮೇಯರ್ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಹಾಕುತ್ತಿದ್ದೇವೆ. ಮೇಯರ್ ಪಟ್ಟವನ್ನೂ ಗೆಲ್ಲುವ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಶಾಸಕರು ಅನರ್ಹರಾಗಿದ್ದಾರೆ ಎಂಬ ಕಾರಣಕ್ಕೆ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ನಾವು ಮೇಯರ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸದ್ಯದಲ್ಲೇ ಅಭ್ಯರ್ಥಿ ಯಾರು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಪಟ್ಟಿ ಶುಕ್ರವಾರ ಫೈನಲ್‌

ಬಿಬಿಎಂಪಿಯಲ್ಲಿ ಪಕ್ಷಗಳ ಸಂಖ್ಯಾಬಲದಲ್ಲಿ ಉಂಟಾಗಿರುವ ವ್ಯತ್ಯಾಸದಿಂದಾಗಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಚರ್ಚೆ ನಡೆಯಿತು. ಸಭೆಯಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮದ್, ಶಾಸಕರಾದ ಭೈರತಿ ಸುರೇಶ್, ಸೌಮ್ಯಾ ರೆಡ್ಡಿ ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಪಾಲಿಕೆ ಸದಸ್ಯರ  ಅಭಿಪ್ರಾಯವನ್ನೂ ಪಡೆದ ಬಳಿಕ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!