ಬಿಬಿಎಂಪಿ ಕಾರ್ಪೋರೇಟರ್ ಪುತ್ರ ಸೆರೆ

By Web DeskFirst Published Dec 19, 2018, 4:15 PM IST
Highlights

ರೌಡಿಶೀಟರ್‌ಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರೊಬ್ಬರ ಪುತ್ರನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಡಿ. 19): ರೌಡಿಶೀಟರ್‌ಯೊಬ್ಬನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರೊಬ್ಬರ ಪುತ್ರನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಂಬೇಗೌಡನಗರ ಕಾರ್ಪೋರೇಟರ್ ಚಂದ್ರಪ್ಪ ಅವರ ಪುತ್ರ ಸೂರಜ್ (25) ಬಂಧಿತ ಆರೋಪಿ.

ಡಿ.4 ರಂದು ರೌಡಿಶೀಟರ್ ಲಕ್ಕಸಂದ್ರ ವಿಜಯ್ ಅಲಿಯಾಸ್ ವಿಜಿ (40)ಯನ್ನು ಕೊಲ್ಲಲಾಗಿತ್ತು. ಈ ಕೊಲೆಗೆ ಸುಪಾರಿ ನೀಡಿದ ಆರೋಪ ಸೂರಜ್ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಿ ಕಳೆದ ಚುನಾವಣೆಯಲ್ಲಿ ಚಂದ್ರಪ್ಪ ಅವರ ಚುನಾವಣೆ ಗೆಲ್ಲಲು ಸಹಕರಿಸಿದ್ದ. ಆದರೆ ಚಂದ್ರಪ್ಪ ಅವರ ಪುತ್ರ ಸೂರಾಜ್ ಮತ್ತು ವಿಜಿ ನಡುವೆ ಆಗ್ಗಾಗ್ಗೆ ಜಗಳ ನಡೆಯುತ್ತಿತ್ತು.

ನಾನಾ ಠಾಣೆಗಳಲ್ಲಿ ರೌಡಿಶೀಟರ್ ಕೂಡ ಆಗಿದ್ದ ವಿಜಿ 2017ರ ಫೆಬ್ರವರಿಯಲ್ಲಿ ಯಲಹಂಕದಲ್ಲಿ ನಡೆದಿದ್ದ ಕಡಬಗೆರೆ ಶ್ರೀನಿವಾಸ್ ಕೊಲೆ ಯತ್ನ ಮತ್ತು ಶೂಟೌಟ್ ಪ್ರಕರಣದಲ್ಲೂ ಆರೋಪಿ ಆಗಿದ್ದ. ತನ್ನ ಹಿಂಬಾಲಕರಿಗೇ ಹೆಚ್ಚಿನ ಪ್ರಮಾಣದ ಬಿಬಿಎಂಪಿ ಗುತ್ತಿಗೆ ಕೊಡಬೇಕು ಎಂದು ಕಾರ್ಪೋರೇಟರ್ ಚಂದ್ರಪ್ಪರ ಮೇಲೆ ವಿಜಿ ಒತ್ತಡ ಹೇರುತ್ತಿದ್ದ. ಆದರೆ, ಮಗ ಸೂರಜ್‌ನನ್ನು ಗುತ್ತಿಗೆದಾರನನ್ನಾಗಿಸಿ ಆತನಿಗೆ ಹೆಚ್ಚಿನ ಕೆಲಸ ಕೊಡುತ್ತಿದ್ದಾರೆ ಎನ್ನುವ ಅಸಮಾಧಾನ ವಿಜಿಗೆ ಇತ್ತು.

ಈ ಕಾರಣಕ್ಕೇ ವಿಜಿ ಮತ್ತು ಸೂರಜ್ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ಆದರೆ ಪ್ರತೀ ಬಾರಿ ಚಂದ್ರಪ್ಪ ವಿಜಿ ಪರವಾಗಿಯೇ ವಕಾಲತ್ತು ವಹಿಸುತ್ತಿದ್ದರು. ಇದು ಮಗ ಸೂರಜ್ನನ್ನು ಕೆರಳಿಸಿತ್ತು. ಅಲ್ಲದೆ ಕೆಲ ತಿಂಗಳುಗಳ ಹಿಂದೆ ವಿಜಿಯ ಸಹಚರರು ಸೂರಜ್‌ನ ಕಾರಿಗೆ ಬೇಕಂತಲೇ ಡಿಕ್ಕಿ ಹೊಡೆದು ಬೆದರಿಕೆಯೊಡ್ಡಿದ್ದರು. ಜೀವನ್ ಭೀಮಾನಗರದ ಗಾರ್ಡನ್ ರಸ್ತೆಯ ಶಫೀವುಲ್ಲಾ ಗ್ಯಾಂಗ್‌ಗೆ ವಿಜಿ ಹತ್ಯೆಗೆ ಸೂರಾಜ್ ಸುಪಾರಿ ನೀಡಿದ್ದ ಎಂದು ಪೊಲೀಸರು ತಿಳಿಸಿದಾರೆ. 

click me!