
ನವದೆಹಲಿ(ಅ. 27): ತನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಸುಲಿಗೆ ಮತ್ತು ಬ್ಲ್ಯಾಕ್'ಮೇಲ್ ಕೇಸ್'ನಲ್ಲಿ ಸಿಲುಕಿಸಿ ಬಂಧಿಸಲಾಗಿದೆ ಎಂದು ಬಿಬಿಸಿ ಪತ್ರಕರ್ತ ವಿನೋದ್ ವರ್ಮಾ ಶುಕ್ರವಾರ ಆರೋಪಿಸಿದ್ದಾರೆ. ಛತ್ತೀಸ್'ಗಢದ ಮುಖ್ಯಮಂತ್ರಿಗಳ ಸೆಕ್ಸ್ ಸಿಡಿಗಳು ತನ್ನ ಬಳಿ ಇದ್ದದ್ದರಿಂದ ಷಡ್ಯಂತ್ರ ರೂಪಿಸಿ ತನ್ನನ್ನು ಬೇಕಂತಲೇ ಸುಲಿಗೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಿನೋದ್ ವರ್ಮಾ ದೂರಿದ್ದಾರೆ.
ಸುಲಿಗೆ ಮತ್ತು ಬ್ಲ್ಯಾಕ್'ಮೇಲ್ ಆರೋಪದ ಮೇಲೆ ಛತ್ತೀಸ್'ಗಡ ಪೊಲೀಸರು ಶುಕ್ರವಾರ ಘಾಜಿಯಾಬಾದ್'ನಲ್ಲಿ ವಿನೋದ್ ವರ್ಮಾ ಅವರನ್ನು ಬಂಧಿಸಿದ್ದಾರೆ. ನಗರದ ಇಂದಿರಾಪುರಂ ಮಹುಣ್ ಮ್ಯಾನ್ಷನ್ ಅಪಾರ್ಟ್'ಮೆಂಟ್ಸ್'ನಲ್ಲಿರುವ ವರ್ಮಾ ಮನೆಯ ಮೇಲೆ ಮಧ್ಯಾಹ್ನ 3:30ಕ್ಕೆ ದಾಳಿ ಮಾಡಿದ ಪೊಲೀಸರು, ಮನೆಯಲ್ಲಿ 500 ಅಶ್ಲೀಲ ಸಿಡಿಗಳು, 2 ಲಕ್ಷ ನಗದು ಹಣ, ಪೆನ್'ಡ್ರೈವ್, ಲ್ಯಾಪ್'ಟಾಪ್ ಮತ್ತು ಡೈರಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ಅವಕಾಶ ಪಡೆದ ಬಿಬಿಸಿ ಪ್ರತಿನಿಧಿ, ಛತ್ತೀಸ್'ಗಡ ಸಚಿವರ ಸೆಕ್ಸ್ ಸಿಡಿ ತನ್ನ ಬಳಿ ಇರುವುದರಿಂದ ತನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಏನಿದು ಸುಲಿಗೆ ಪ್ರಕರಣ?
ರಾಯಪುರದ ಪಂಡ್ರಿ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ಬಜಾಜ್ ಎಂಬುವವರು ಆಗುಂತಕ ವ್ಯಕ್ತಿ ವಿರುದ್ಧ ಸುಲಿಗೆ ದೂರು ದಾಖಲಿಸಿರುತ್ತಾರೆ. ನಿನ್ನ ಬಾಸ್'ನ ಸಿಡಿ ನನ್ನ ಬಳಿ ಇದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಹೆದರಿಸುತ್ತಿದ್ದಾನೆಂದು ಪ್ರಕಾಶ್ ಬಜಾಜ್ ತನ್ನ ದೂರಿನಲ್ಲಿ ತಿಳಿಸಿರುತ್ತಾರೆ. ಫೋನ್ ಕರೆ ಮಾಡಿದ ಆ ವ್ಯಕ್ತಿಯ ಜಾಡು ಹಿಡಿದು ಹೊರಟಾಗ ವಿನೋದ್ ವರ್ಮಾ ಸಿಕ್ಕಿಬಿದ್ದರು ಎಂದು ರಾಯಪುರದ ಪೊಲೀಸರು ತಿಳಿಸಿದ್ದಾರೆ.
ವಿನೋದ್ ವರ್ಮಾ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದ್ದು, ಛತ್ತೀಸ್'ಗಢದ ವಿರೋಧ ಪಕ್ಷ ಕಾಂಗ್ರೆಸ್ ಬಿಬಿಸಿ ಪತ್ರಕರ್ತನ ರಕ್ಷಣೆಗೆ ಧಾವಿಸಿದೆ. ಬಿಜೆಪಿ ತನ್ನ ಕಳಂಕಿತ ಸಚಿವರನ್ನು ರಕ್ಷಿಸಿ ಅಮಾಯಕ ಪತ್ರಕರ್ತನನ್ನು ಸಿಲುಕಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಭೂಪೇಶ್ ಬಘೆಲ್ ಟೀಕಿಸಿದ್ದಾರೆ.
ಕೆಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳ ಪ್ರಕಾರ, ವಿನೋದ್ ವರ್ಮಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದುದು ಛತ್ತೀಸ್'ಗಢದ ಲೋಕೋಪಯೋಗಿ ಸಚಿವ ರಾಜೇಶ್ ಕುಮಾರ್ ಅವರನ್ನೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.