
ನವದೆಹಲಿ : ಕೇರಳದಲ್ಲಿ 12 ಮಂದಿಯನ್ನು ಬಲಿ ತೆಗೆದುಕೊಂಡ ನಿಪಾ ವೈರಸ್ ಸೋಂಕಿನ ಮೂಲ ಇಲ್ಲಿಯವರೆಗೆ ನಂಬಿದ್ದಂತೆ ಬಾವಲಿ ಹಾಗೂ ಹಂದಿ ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡವು ನಿಪಾ ಹರಡಲು ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಇತರ ಮೂಲಗಳನ್ನು ಶೋಧಿಸತೊಡಗಿದೆ.
ಕೆಲ ದಿನಗಳಿಂದ ನಿಪಾ ವೈರಾಣು ಸೋಂಕಿನಿಂದ ಕೇರಳದ ಕೋಳಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಜನರು ಸಾವಿಗೀಡಾದ ವರದಿಗಳು ಬರತೊಡಗಿದ್ದರಿಂದ ಕೇಂದ್ರ ಸರ್ಕಾರವು ಅಲ್ಲಿಗೆ ತಜ್ಞರ ತಂಡ ವನ್ನು ಕಳುಹಿಸಿತ್ತು. ಆ ತಂಡವು ನಿಪಾ ಸೋಂಕಿನಿಂದ ಸಾವಿಗೀಡಾದ ಊರಿನ ಬಾವಲಿಗಳಿಂದ 7 ಸ್ಯಾಂಪಲ್, ಹಂದಿಗಳಿಂದ 2 ಸ್ಯಾಂಪಲ್, ಕಾಡೆಮ್ಮೆಯಿಂದ ಹಾಗೂ ಕುರಿಯಿಂದ ತಲಾ ಒಂದೊಂದು ಸ್ಯಾಂಪ ಲ್ ಗಳನ್ನು ಪುಣೆಯ ವೈರಾಲಜಿ ಕೇಂದ್ರಕ್ಕೆ ಕಳುಹಿಸಿತ್ತು. ಅಲ್ಲಿನ ಪರೀಕ್ಷಾ ವರದಿ ಈಗ ಬಂದಿದ್ದು, ಯಾವ ಸ್ಯಾಂಪಲ್‌ನಲ್ಲೂ ನಿಪಾ ವೈರಸ್ ಪತ್ತೆಯಾಗಿಲ್ಲ.
ಕೋಳಿಕ್ಕೋಡ್ ಜಿಲ್ಲೆಯ ಪೆರಾಂಬ್ರಾ ಎಂಬಲ್ಲಿ ಮೊದಲ ನಿಪಾ ಪ್ರಕರಣ ಪತ್ತೆಯಾದವರ ಮನೆಯ ಬಾವಿಯಲ್ಲಿರುವ ಬಾವಲಿಗಳ ಮಾದರಿಯನ್ನೂ ಸಂಗ್ರಹಿಸಲಾಗಿತ್ತು. ಅವುಗಳಲ್ಲೂ ನಿಪಾ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಇಲ್ಲಿಯವರೆಗೆ ಕೇರಳದಲ್ಲಿ 15 ಮಂದಿಗೆ ನಿಪಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ. ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳ ಹೊರತುಪಡಿಸಿ ದೇಶದ ಇನ್ನಾವುದೇ ರಾಜ್ಯದಲ್ಲೂ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.