
ಶ್ರೀನಗರ(ಅ.03): ಕಳೆದ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ದಮನ ಮಾಡಲಾಗಿದೆ. ಆದರೆ, ಭಾರತೀಯ ಸೈನಿಕರ ದಾಳಿಯಲ್ಲಿ ಗಾಯಗೊಂಡಿರುವ ಮತ್ತೋರ್ವ ಉಗ್ರ ಪ್ರಾಣ ಉಳಿಸಿಕೊಳ್ಳಲು ಝೇಲಂ ನದಿಗೆ ಹಾರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸೇನಾ ಮೂಲಗಳ ಪ್ರಕಾರ ಬಾರಾಮುಲ್ಲಾದ ಹಿಂಬದಿಯಲ್ಲಿರುವ ಪಾರ್ಕ್ ಮೂಲಕ ಸೇನಾ ಶಿಬಿರ ಪ್ರವೇಶಿಸುವ ಉಗ್ರರ ಯತ್ನವನ್ನು ಸೈನಿಕರು ತಡೆದಿದ್ದಾರೆ. ಈ ವೇಳೆ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದ್ದು, ಪ್ರಾಣಭೀತಿಯಿಂದ ಓರ್ವ ಉಗ್ರ ಬಾರಾಮುಲ್ಲಾ ತೊರೆದಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಭಾರತೀಯ ಸೇನೆಯ ಒಂದಷ್ಟು ಯೋಧರು ಬೆನ್ನು ಹತ್ತಿದ್ದು, ಸಮೀಪದ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಮತ್ತೊಂದೆಡೆ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ಉಗ್ರ ಸಮೀಪದ ಝೇಲಂ ನದಿಗೆ ಹಾರಿ ಪ್ರಾಣ ಉಳಿಸಿಕೊಳ್ಳುವ ಯತ್ನ ನಡೆಸಿದ್ದಾನೆ. ಮೂಲಗಳ ಪ್ರಕಾರ ಝೇಲಂ ನದಿಗೆ ಹಾರಿರುವ ಗಾಯಗೊಂಡ ಉಗ್ರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ಕಳೆದ ರಾತ್ರಿಯಿಂದ ನಡೆಯುತ್ತಿದ್ದ ಸೇನಾಕಾರ್ಯಾಚರಣೆ ಮುಕ್ತಾಯವಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನೆ ಹೇಳಿಕೆ ನೀಡಿದೆ. ಸೇನೆಯ ಪ್ರಾಥಮಿಕ ಮೂಲಗಳ ಪ್ರಕಾರ ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನದಿಂದ ಯಾವುದೇ ಉಗ್ರರು ಭಾರತಕ್ಕೆ ನುಸುಳಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿರುವ ಕೆಲ ಸ್ಲೀಪರ್ ಸೆಲ್'ಗಳಿಗೇ ಅಲ್ಲಿನ ಉಗ್ರಗಾಮಿ ಸಂಘಟನೆ ಮುಖಂಡರು ನಿರ್ದೇಶನ ನೀಡುವ ಮೂಲಕ ದಾಳಿ ನಡೆಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.