
ನವದೆಹಲಿ(ಜೂ.26): ಮನೆಯಲ್ಲಿ ಹಣ, ಒಡವೆ ಅಥವಾ ಮಹತ್ವದ ಕಾಗದಪತ್ರಗಳನ್ನು ಇಟ್ಟರೆ ಕಳವಾಗಬಹುದು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ. ಆದರೆ ಲಾಕರ್‌ನಲ್ಲಿಟ್ಟ ವಸ್ತುಗಳೇ ಕಳ್ಳ-ಕಾಕರು, ಡಕಾಯಿತರ ಪಾಲಾದರೆ..?
ಸಹಜವಾಗಿ ಬರುವ ಉತ್ತರ... ಇದಕ್ಕೆ ಬ್ಯಾಂಕ್‌ಗಳೇ ಜವಾಬ್ದಾರಿ. ನಷ್ಟಕ್ಕೆ ಅವರು ಪರಿಹಾರ ತುಂಬಿಕೊಡಬೇಕು ಎಂಬುದು. ಆದರೆ ನಿಮ್ಮ ಗ್ರಹಿಕೆ ತಪ್ಪಾದೀತು. ಬ್ಯಾಂಕ್ ಲಾಕರ್ ಒಂದು ವೇಳೆ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಜವಾಬ್ದಾರರಲ್ಲವಂತೆ. ಹಾಗಂತ ಮಾಹಿತಿ ಹಕ್ಕು ಅಡಿ ಹಾಕಲಾದ ಅರ್ಜಿಯೊಂದರಿಂದ ತಿಳಿದುಬಂದಿದೆ.
‘ಬ್ಯಾಂಕ್ ಲಾಕರ್‌ನಲ್ಲಿನ ಹಣ ಲೂಟಿಯಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ಹೊಣೆಯಲ್ಲ ಎಂದು ಲಾಕರ್ ಬಾಡಿಗೆ ಪಡೆಯುವ ವೇಳೆ ಮಾಡಿಕೊಳ್ಳುವ ಒಪ್ಪಂದದಲ್ಲಿ ನಮೂದಿಸಿರಲಾಗುತ್ತದೆ’ ಎಂದು ಆರ್‌ಟಿಐ ಅಡಿ ಕೇಳಲಾದ ಪ್ರಶ್ನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ 19 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್'ಗಳು ಸ್ಪಷ್ಟವಾಗಿ ಹೇಳಿವೆ.
ಆದರೆ ಈ ಮಾಹಿತಿಯಿಂದ ಚಕಿತವಾಗಿರುವ ಅರ್ಜಿದಾರ ವಕೀಲ ಕುಶ್ ಕಾಲ್ರಾ ಎಂಬುವವರು, ಇದರ ವಿರುದ್ಧ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮೊರೆ ಹೋಗಿದ್ದಾರೆ. ‘ಇಂಥ ನಿಯಮಗಳು ಸ್ಪರ್ಧಾತ್ಮಕತೆಗೆ ವಿರುದ್ಧವಾಗಿವೆ. ಮನೆಯಲ್ಲಿ ಅಸುರಕ್ಷಿತ ಎಂಬ ಕಾರಣಕ್ಕೇ ಬ್ಯಾಂಕ್ ಲಾಕರ್‌ನಲ್ಲಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಆದರೆ ಲಾಕರ್ ಕೂಡ ಕಳವಾದರೆ ಅದರ ಹೊಣೆಯನ್ನು ಬ್ಯಾಂಕ್‌ಗಳು ಹೊರದೇ ಹೋದಾಗ, ಬ್ಯಾಂಕ್ ಲಾಕರ್‌ಗೆ ಸಾಕಷ್ಟು ಶುಲ್ಕ ತುಂಬಿ ವಸ್ತುಗಳನ್ನು ಇಡುವುದರಿಂದ ಏನು ಪ್ರಯೋಜನ’ ಎಂದು ವಾದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.