ಜನನಿಬಿಡ ಪ್ರದೇಶದಲ್ಲಿರುವ ಬ್ಯಾಂಕ್‌ವೊಂದರಿಂದ ಸಿಬ್ಬಂದಿಯನ್ನು ಯಾಮಾರಿಸಿ ಹಾಡಹಗಲೇ ಲಕ್ಷಾಂತರ ರುಪಾಯಿ ಹಣ ಲಪಟಾಯಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ (ಜು.06): ಜನನಿಬಿಡ ಪ್ರದೇಶದಲ್ಲಿರುವ ಬ್ಯಾಂಕ್‌ವೊಂದರಿಂದ ಸಿಬ್ಬಂದಿಯನ್ನು ಯಾಮಾರಿಸಿ ಹಾಡಹಗಲೇ ಲಕ್ಷಾಂತರ ರುಪಾಯಿ ಹಣ ಲಪಟಾಯಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಮಾರುಕಟ್ಟೆ ಪ್ರದೇಶದಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆ ಗುರುವಾರ ಮಧ್ಯಾಹ್ನ 12 ರ ಸುಮಾರಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಯ ಸಿಬ್ಬಂದಿಯನ್ನು ಯಾಮಾರಿಸಿದ ಐವರ ತಂಡ ₹12 ಲಕ್ಷದೊಂದಿಗೆ ಪರಾರಿಯಾಗಿದೆ.
ಘಟನೆ ನಡೆದದ್ದು ಹೀಗೆ:ಗ್ರಾಹಕರ ಸೋಗಿನಲ್ಲಿ ಬಂದ ಐವರಿದ್ದ ತಂಡ ಕ್ಯಾಷ್ ಕೌಂಟರ್ ಬಳಿ ನಿಂತಿದ್ದಾರೆ. ಅಲ್ಲೇ ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಹಕರಂತೆ ಪರಸ್ಪರ ಚರ್ಚಿಸಿದ್ದಾರೆ. ಕ್ಯಾಷಿಯರ್ ಜತೆ ಕೂಡ ಆಗಾಗ ಬ್ಯಾಂಕಿನಲ್ಲಿ ವಹಿವಾಟು ನಡೆಸುವ ಕುರಿತು ಮಾತನಾಡಿದ್ದಾರೆ. ಬಳಿಕ ಮಧ್ಯಾಹ್ನ 12 ರ ಸುಮಾರಿಗೆ ನಾಲ್ವರು ಮತ್ತೆ ಕ್ಯಾಷಿಯರ್ ಜತೆ ಮಾತಾರಂಭಿಸಿ ಅವರ ಗಮನವನ್ನು ತಮ್ಮ ಕಡೆಗೆ ಸೆಳೆದಿದ್ದಾರೆ.
ಈ ವೇಳೆ ಇನ್ನೊಬ್ಬ ಬ್ಯಾಂಕ್ ಸಿಬ್ಬಂದಿಯಂತೆ ನೇರವಾಗಿ ಬ್ಯಾಂಕಿನ ಒಳ ಆವರಣದೊಳಗೆ ಹೋಗಿ ಕ್ಯಾಷ್ ಕೌಂಟರ್ ಪ್ರವೇಶಿಸಿದ್ದಾನೆ. ಆದರೂ ಕ್ಯಾಷಿಯರ್‌ಗೆ ಗಮನಕ್ಕೆ ಬಂದಿಲ್ಲ. ಹೀಗೆ ಒಳಗೆ ಬಂದ ಆತ, ಕ್ಯಾಷಿಯರ್ ಟೇಬಲ್ ಮೇಲೆ ಇರಿಸಿಕೊಂಡಿದ್ದ ₹12 ಲಕ್ಷ ನಗದನ್ನು ಎಗರಿಸಿದ್ದಾನೆ. ಬಳಿಕ ಅಲ್ಲಿಂದ ಹೊರಗೆ ನಡೆದಿದ್ದಾನೆ. ಆಗ ಉಳಿದ ನಾಲ್ವರು ಒಬ್ಬೊಬ್ಬರಾಗಿ ಬ್ಯಾಂಕಿನಿಂದ ಹೊರಗೆ ಹೋಗಿದ್ದಾರೆ. ಇದಾದ ಬಳಿಕ ಕೆಲ ಸಮಯದ ಕಳೆಯುತ್ತಿದ್ದಂತೆ ಕ್ಯಾಷಿಯರ್ ಹಣದತ್ತ ನೋಡಿದಾಗ ಹಣ ಕಡಿಮೆ ಇರುವುದು ಪತ್ತೆಯಾಗಿದೆ. ಎಣಿಕೆ ಮಾಡಿದಾಗ ₹12 ಲಕ್ಷ ಹಣ ಕಳ್ಳತನವಾಗಿರುವುದು ಖಚಿತವಾಗಿದೆ. ಕೂಡಲೇ ಶಾಖಾ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕರು ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಘಟನೆ ವೇಳೆ ಬ್ಯಾಂಕಿನಲ್ಲಿ ಉಳಿದ ಸಿಬ್ಬಂದಿ ಹಾಗೂ ಕೆಲ ಗ್ರಾಹಕರು ಇದ್ದರು. ಯಾರಿಗೂ ಹಣ ಯಾಮಾರಿಸಿದ ವಿಷಯ ಗಮನಕ್ಕೆ ಬಂದಿಲ್ಲ.
ಬ್ಯಾಂಕಿನ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಫೂಟೇಜ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಫೂಟೇಜ್‌ನಲ್ಲಿ ಕಳ್ಳರ ಚಲನವಲನ, ಮುಖಗಳ ಸ್ಪಷ್ಟ ಚಿತ್ರಣ ದೊರೆತ್ತಿದೆ. ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.