ಮತ್ತೊಂದು ಭಾರೀ ಸರ್ಕಾರಿ ಬ್ಯಾಂಕಿಂಗ್‌ ಹಗರಣ

First Published Jun 21, 2018, 8:45 AM IST
Highlights

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದ ಆರೋಪಿಗಳ ಬಂಧನಕ್ಕೆ ತನಿಖಾ ಸಂಸ್ಥೆಗಳು ಪರದಾಡುತ್ತಿರುವಾಗಲೇ ಮತ್ತೊಂದು ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್‌ ಹಗರಣವೊಂದು ಬಯಲಾಗಿದೆ. 

ಪುಣೆ :  ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣದ ಆರೋಪಿಗಳ ಬಂಧನಕ್ಕೆ ತನಿಖಾ ಸಂಸ್ಥೆಗಳು ಪರದಾಡುತ್ತಿರುವಾಗಲೇ ಮತ್ತೊಂದು ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್‌ ಹಗರಣವೊಂದು ಬಯಲಾಗಿದೆ. ಪುಣೆ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕಂಪನಿಗೆ ಯಾವುದೇ ನಿಯಮಗಳನ್ನು ಪಾಲನೆ ಮಾಡದೇ ಬೇಕಾಬಿಟ್ಟಿಸಾಲ ಮಂಜೂರು ಮಾಡಿದ ಆರೋಪ ಸಂಬಂಧ ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಹಾಲಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ), ಮಾಜಿ ಸಿಎಂಡಿ ಹಾಗೂ ಇನ್ನಿತರೆ ಅಧಿಕಾರಿಗಳನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಹಾಲಿ ಸಿಎಂಡಿ ರವೀಂದ್ರ ಮರಾಠೆ, ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಗುಪ್ತಾ, ವಲಯ ವ್ಯವಸ್ಥಾಪಕ ನಿತ್ಯಾನಂದ ದೇಶಪಾಂಡೆ, ಬ್ಯಾಂಕಿನ ಮಾಜಿ ಸಿಎಂಡಿ ಸುಶೀಲ್‌ ಮುಹ್ನೋತ್‌ ಅವರು ಬಂಧಿತರು. ಇದಲ್ಲದೆ ಡಿ.ಎಸ್‌. ಕುಲಕರ್ಣಿ ಹಾಗೂ ಅವರ ಪತ್ನಿ ಮಾಲೀಕತ್ವದ ರಿಯಲ್‌ ಎಸ್ಟೇಟ್‌ ಕಂಪನಿಯ ಸಿಎ ಸುಶೀಲ್‌ ಘಟಪಾಂಡೆ, ಕುಲಕರ್ಣಿ ಸಂಸ್ಥೆಯ ಎಂಜಿನಿಯರಿಂಗ್‌ ವಿಭಾಗದ ಉಪಾಧ್ಯಕ್ಷ ರಾಜೀವ್‌ ನಿವಾಸಕರ್‌ ಅವರನ್ನೂ ಬಂಧಿಸಲಾಗಿದೆ.

ಪುಣೆ ಮೂಲದ ಕುಲಕರ್ಣಿ ರಿಯಲ್‌ ಎಸ್ಟೇಟ್‌ ಕಂಪನಿ 2043 ಕೋಟಿ ರು. ಹಗರಣ ನಡೆಸಿದ ಆರೋಪ ಹೊತ್ತಿದೆ. 33 ಸಾವಿರ ಹೂಡಿಕೆದಾರರಿಂದ ಹಣ ಸಂಗ್ರಹಿಸಿದ್ದೂ ಅಲ್ಲದೆ, ಹೆಚ್ಚಿನ ಬಡ್ಡಿಯ ಆಸೆ ತೋರಿಸಿ, ಠೇವಣಿ ಸಂಗ್ರಹಿಸಿದ ಆರೋಪ ಎದುರಿಸುತ್ತಿದೆ. ಇದೇ ಕಂಪನಿ ಜತೆ ಶಾಮೀಲಾಗಿ ಬ್ಯಾಂಕ್‌ ಮಹಾರಾಷ್ಟ್ರದ ಅಧಿಕಾರಿಗಳು ಬೇಕಾಬಿಟ್ಟಿಸಾಲ ಮಂಜೂರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಕುಲಕರ್ಣಿ ದಂಪತಿ ಬಂಧನದಲ್ಲಿದ್ದಾರೆ.

click me!