ರೈತರಿಗೆ ಗುಡ್ ನ್ಯೂಸ್ : ಮೋದಿ ಸರ್ಕಾರದಿಂದ ಕೃಷಿಗೆ ಭರ್ಜರಿ ಕೊಡುಗೆ

First Published Jun 21, 2018, 8:36 AM IST
Highlights

2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಸಾಧಿಸಲು ಕೃಷಿ ವಲಯಕ್ಕೆ ಮೀಸಲಿಟ್ಟಿರುವ ಬಜೆಟ್‌ ಅನ್ನು ಸರ್ಕಾರ ದುಪ್ಪಟ್ಟುಗೊಳಿಸಿ 2.12 ಲಕ್ಷ ಕೋಟಿ ರು.ಗಳಿಗೆ ಏರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನವದೆಹಲಿ: 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಸಾಧಿಸಲು ಕೃಷಿ ವಲಯಕ್ಕೆ ಮೀಸಲಿಟ್ಟಿರುವ ಬಜೆಟ್‌ ಅನ್ನು ಸರ್ಕಾರ ದುಪ್ಪಟ್ಟುಗೊಳಿಸಿ 2.12 ಲಕ್ಷ ಕೋಟಿ ರು.ಗಳಿಗೆ ಏರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ 600 ಜಿಲ್ಲೆಯ ರೈತರ ಜೊತೆ ಮೋದಿ ಸಂವಾದ ನಡೆಸಿದರು. ರೈತರ ಆದಾಯ ಹೆಚ್ಚಿಸುವ ನಿಟ್ಟಿನಿಂದ ವೆಚ್ಚಕ್ಕೆ ಕಡಿವಾಣ, ಬೆಳೆಗಳಿಗೆ ಯೋಗ್ಯ ಬೆಲೆ, ಕೃಷಿ ಉತ್ಪನ್ನಗಳು ಹಾಳಾಗದಂತೆ ಸಂರಕ್ಷಣೆ ಮತ್ತು ಅದಾಯದ ಪರ್ಯಾಯ ಮಾರ್ಗ ಹುಡುಕುವುದು ಹೀಗೆ ನಾಲ್ಕು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕೃಷಿ ವಲಯಕ್ಕೆ ತಮ್ಮ ಸರ್ಕಾರ 2.12 ಲಕ್ಷ ಕೋಟಿ ರು. ಅನುದಾನ ಒದಗಿಸಿದೆ. 2018​-19ನೇ ಸಾಲಿನ ಹಣಕಾಸು ವರ್ಷದಲ್ಲಿ ಕೃಷಿ ಉತ್ಪನ್ನಕ್ಕೆ ತಗುಲುವ ವೆಚ್ಚಕ್ಕಿಂತ ಶೇ.150 ರಷ್ಟುಬೆಲೆ ದೊರೆಯುವಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ನಿಟ್ಟಿನಿಂದ ಸರ್ಕಾರ ಕಾರ್ಯನಿರತವಾಗಿದೆ. ರೈತರಿಗೆ ಏನೇ ನೆರವು ಬೇಕಿದ್ದರೂ ಒದಗಿಸಲಾಗುವುದು. ರೈತರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಷ್ಟೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಬದಲಾಗಿ ಹಾಲು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯೂ ಹಿಂದೆಂದಿಗಿಂತಲೂ ಅಧಿಕವಾಗಿದೆ. 2017​-18ರಲ್ಲಿ 28 ಕೋಟಿ ಟನ್‌ ಆಹಾರಧಾನ್ಯ ಉತ್ಪಾದನೆಯಾಗಿದೆ. ದ್ವಿದಳ ಧಾನ್ಯಗಳ ಉತ್ಪಾದನೆ ಶೇ.10.5ರಷ್ಟುಏರಿಕೆಯಾಗಿದೆ ಎಂದು ಹೇಳಿದರು. ಬಿತ್ತನೆಯಿಂದ ಹಿಡಿದು ಕಟಾವಿನ ತನಕ ಎಲ್ಲಾ ರೀತಿಯ ನೆರವನ್ನು ನೀಡಲಾಗುತ್ತಿದೆ. ಮಣ್ಣಿನ ಗುಣಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಲು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ರೈತರಿಗೆ ಯೋಗ್ಯ ಬೆಲೆ ಸಿಗುವಂತೆ ಖಾತರಿಪಡಿಸಲು ಇ- ನಾಮ್‌ ಎಂಬ ವೆಬ್‌ಸೈಟ್‌ ಆರಂಭಿಸಲಾಗಿದೆ ಎಂದು ಹೇಳಿದರು.

click me!