ಸಿಎಂ ಸ್ವ ಕ್ಷೇತ್ರದಲ್ಲೂ ರೈತ ಮಹಿಳೆಗೆ ನೋಟಿಸ್‌

By Web DeskFirst Published Dec 6, 2018, 9:45 AM IST
Highlights

ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರಿಗೆ ಬ್ಯಾಂಕ್ಗಳು ನೋಟಿಸ್ ನೀಡದಂತೆ ಆದೇಶ ನೀಡಿದ್ದರೆ, ಇತ್ತ ಬ್ಯಾಂಕ್ ಗಳು ನೋಟಿಸ್  ನೀಡೋದನ್ನು ಮಾತ್ರ ನಿಲ್ಲಿಸಿಲ್ಲ. ಇದೀಗ ಸಿಎಂ ಸ್ವಕ್ಷೇತ್ರದಲ್ಲೇ ರೈತ ಮಹಿಳೆಗೆ ಬ್ಯಾಂಕ್ ನೋಟಿಸ್ ಜಾರಿ ಮಾಡಿದೆ. 

ಚನ್ನಪಟ್ಟಣ :  ಒಂದು ಕಡೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಳೆ ಸಾಲಕ್ಕೆ ಸಂಬಂಧಿಸಿ ರೈತರಿಗೆ ನೋಟಿಸ್‌ ನೀಡದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡುತ್ತಿದ್ದರೂ ಇತ್ತ ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲೇ ಸಾಲ ಮರುಪಾವತಿ ಮಾಡದ ರೈತ ಮಹಿಳೆಯೊಬ್ಬರಿಗೆ ಬ್ಯಾಂಕ್‌ವೊಂದು ನ್ಯಾಯಾಲಯದಿಂದ ನೋಟಿಸ್‌ ಜಾರಿ ಮಾಡಿದೆ. 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ರೈತಸಂಘದ ಪದಾಧಿಕಾರಿಗಳು, ರೈತ ಮಹಿಳೆಗೆ ನೀಡಿರುವ ಕೋರ್ಟ್‌ ನೋಟಿಸ್‌ ಪ್ರದರ್ಶಿಸಿ, ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ಜಾರಿಗೊಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಕುರಿದೊಡ್ಡಿ ಗ್ರಾಮದ ಶಾರದಮ್ಮ ತಮ್ಮ 5 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು 2011ರಲ್ಲಿ ಬೇವೂರು ಗ್ರಾಮದ ಕೆನರಾ ಬ್ಯಾಂಕ್‌ನಿಂದ 5 ಲಕ್ಷ ರು. ಸಾಲ ಪಡೆದಿದ್ದರು. ಸಾಲ ಮರುಪಾವತಿಸಿಲ್ಲ ಎಂದು ಅವರಿಗೆ ನೋಟಿಸ್‌ ಬಂದಿದೆ ಎಂದರು.

ಬರ ಹಾಗೂ ಬೆಲೆ ಕುಸಿತದ ಪರಿಣಾಮ ಸಾಲ ಮರುಪಾವತಿ ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾ ಘೋಷಣೆ ಮಾಡಿದ್ದರಿಂದ ರೈತ ಮಹಿಳೆಯ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಬ್ಯಾಂಕ್‌ ಅಧಿಕಾರಿಗಳು ಈಗ ನ್ಯಾಯಾಲಯದಿಂದ ನೋಟಿಸ್‌ ಜಾರಿ ಮಾಡಿದ್ದರಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದು ರೈತ ಸಂಘದ ಮುಖಂಡರು ಹೇಳಿದರು.

ಮುಖ್ಯಮಂತ್ರಿಗಳು ಹೋದಲ್ಲೆಲ್ಲ ಸಾಲ ಮನ್ನಾ ಯೋಜನೆ ಮಾಡಿದ್ದೇನೆ ಎಂದು ಹೇಳುವ ಬದಲು ಈ ಕುರಿತು ಬ್ಯಾಂಕ್‌ಗಳಿಗೆ ಸೂಚನೆ ನೀಡಲಿ ಎಂದು ಇದೇ ವೇಳೆ ರೈತ ಮುಖಂಡರು ಆಗ್ರಹಿಸಿದರು.

click me!