
ಬೆಂಗಳೂರು : ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದುಹೋಗುವ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎನ್‌ಎಚ್ 212 ಮತ್ತು 67) ರಾತ್ರಿ ಸಂಚಾರದ ಮೇಲಿನ ನಿಷೇಧ ತೆರವುಗೊಳಿಸುವಂತೆ ಮನವಿ ಮಾಡಿ ಮುಖಭಂಗ ಅನುಭವಿಸಿದ್ದ ಕೇರಳ ಇದೀಗ ಬೇರೊಂದು ಮಾರ್ಗದಲ್ಲಿ ಮತ್ತೊಮ್ಮೆ ರಾಜ್ಯದ ಮೇಲೆ ಒತ್ತಡ ಹೇರಲು ಸಜ್ಜಾಗಿದೆ.
ಶುಕ್ರವಾರ ನಗರದಲ್ಲಿ ನಡೆದ ದಕ್ಷಿಣ ಭಾರತ ಸಾರಿಗೆ ನಿಗಮಗಳ ಕೌನ್ಸಿಲ್‌ನ (ಸಿಟ್ಕೋ) 22ನೇ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಕೇರಳ ಸಾರಿಗೆ ಇಲಾಖೆ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದುಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರದ ನಿಷೇಧ ತೆರವಿನ ಬೇಡಿಕೆ ಇರಿಸಿದೆ. ಸಿಟ್ಕೋದಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಂಟು ರಾಜ್ಯಗಳ ಸಾರಿಗೆ ಇಲಾಖೆ ಸದಸ್ಯತ್ವ ಹೊಂದಿವೆ. ಈ ವೇದಿಕೆ ಮೂಲಕ ಅರಣ್ಯ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಆದರೆ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಕೇರಳ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ರಾಜ್ಯ ಸಾರಿಗೆ ಇಲಾಖೆಯ ಯಾವ ಪಾತ್ರವೂ ಇಲ್ಲ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದುಹೋಗುವ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರಕ್ಕೆ ನಮ್ಮ ವಿರೋಧವೂ ಇದೆ. ಕೇರಳದ ಪ್ರತಿಪಾದನೆಗೆ ಕರ್ನಾಟಕ ಸಾರಿಗೆ ಇಲಾಖೆ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಿಷೇಧದ ಈ ವಿಚಾರ ಅರಣ್ಯ ಇಲಾಖೆಗೆ ಸಂಬಂಧಿಸಿದ್ದು, ಈಗಾಗಲೇ ಕೋರ್ಟ್‌ನಲ್ಲಿ ಇದೆ. ಹಾಗಾಗಿ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ ಎಂದು ಅವರು ವಿವರಿಸಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ಒಂದೇ ಒಂದು ವಾಹನ ಸಂಚರಿಸಬಾರದು. ಸರ್ಕಾರಿ ಅಥವಾ ಖಾಸಗಿ ಯಾವುದೇ ವಾಹನಗಳಿಗೂ ಅವಕಾಶ ನೀಡಬಾರದು. ಕೇರಳ ಬುದ್ಧವಂತಿಕೆಯಿಂದ ಎರಡೂ ರಾಜ್ಯಗಳ ಸರ್ಕಾರಿ ಬಸ್‌ಗಳು ಓಡಾಡಲು ಅವಕಾಶ ಮಾಡುವಂತೆ ಮನವಿ ಮಾಡಿದೆ. ಇದಕ್ಕೆ ಮಣಿಯಬಾರದು. ರಾತ್ರಿ ಸಂಚಾರದ ಮೇಲಿನ ನಿಷೇಧ ತೆರವುಗೊಳಿಸದಂತೆ ಆಗ್ರಹಿಸಿ ಭಾನುವಾರ(ಮಾ.11) ಬಂಡೀಪುರ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
- ವಾಟಾಳ್ ನಾಗರಾಜ್, ಅಧ್ಯಕ್ಷ, ಕನ್ನಡ ಒಕ್ಕೂಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.