
ಕಲಬುರ್ಗಿ(ಅ.03): ಒಂದು ಕಡೆ ರಾಜ್ಯ ಸರ್ಕಾರ ಮಾಟ ಮಂತ್ರ ಭಾನಮತಿಯಂತಹ ಮೌಢ್ಯಗಳನ್ನ ನಿಷೇಧ ಮಾಡೋದಕ್ಕೆ ಮುಂದಾಗಿದ್ರೆ, ಕಲಬುರಗಿಯಲ್ಲಿ ಮಾತ್ರ ಭಾನಾಮತಿಯ ಹಾವಳಿ ಹೆಚ್ಚಾಗಿದೆ. ಜೇವರ್ಗಿ ತಾಲೂಕಿನ ಹಂಚಿನಾಳ ಹೆಚ್.ಎನ್ ಗ್ರಾಮದ ಕುಟುಂಬವೊಂದು ಭಾನಾಮತಿ ಕಾಟದಿಂದ ನಲುಗಿ ಹೋಗಿದೆ. ಆಸ್ತಿ ವಿಚಾರಕ್ಕೆ ಶರಣಯ್ಯ ಕುಟುಂಬದ ವಿರುದ್ಧ ಭಾನಾಮತಿ ಎಂಬ ಮೌಢ್ಯದ ಅಸ್ತ್ರವನ್ನ ಪ್ರಯೋಗ ಮಾಡಲಾಗಿದೆ.
ವಿಜಯದಶಮಿ ದಿನ ಗ್ರಾಮದ ಮುಂದೆ ಶರಣಯ್ಯ ಕುಟುಂಬದ 14 ಜನರ ಹೆಸರುಗಳನ್ನು ಕುಂಬಳಕಾಯಿ ಮೇಲೆ ಬರೆದು ಅದರ ಮೇಲೆ ತೆಂಗಿನ ಚಿಪ್ಪು ಮತ್ತು ದೀಪವಿಟ್ಟು ಅರಿಶಿಣ ಕುಂಕುಮದಿಂದ ಪೂಜೆ ಮಾಡಿ ಭಾನಾಮತಿ ಪ್ರಯೋಗಿಸಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಈ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಪುಟ್ಟ ಪುಟ್ಟ ಮಕ್ಕಳ ಹೆಸರುಗಳನ್ನೂ ಸಹ ಕುಂಬಳಕಾಯಿ ಮೇಲೆ ಬರೆದಿರುವುದು ಕುಟುಂಬದವರಲ್ಲಿ ಆತಂಕ ಹೆಚ್ಚಿದೆ.
ನಮ್ಮ ಸಂಬಂಧಿಯೊಬ್ಬರ ಜೊತೆ ನಿವೇಶನ ವ್ಯಾಜ್ಯವಿದೆ. ಅವರೇ ಈ ಕೃತ್ಯ ನಡೆಸಿದ್ದಾರೆ ಎಂದು ಕುಟುಂಬದ ಮುಖ್ಯಸ್ಥ ಶರಣಯ್ಯ ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ನೆಲೋಗಿ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದರೂ ಕಲಬುರಗಿಯಲ್ಲಿ ಮಾತ್ರ ಭಾನಾಮತಿಯಂತಹ ಅನಿಷ್ಟಗಳು ಎಗ್ಗಿಲ್ಲದೆ ನಡೆಯುತ್ತಲೇ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.